ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್
ಜಗಳೂರು, ಮಾ.22- ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಕೇವಲ 5 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸಿರುವುದು ಜನರ ಕಣ್ಣ ಮುಂದಿದೆ. ಬಿಜೆಪಿ ಪಕ್ಷದವರ ಅಭಿವೃದ್ಧಿ ಶೂನ್ಯ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ದಾಖಲೆ ಸಮೇತ ಶಾಸಕ ಎಸ್.ವಿ. ರಾಮಚಂದ್ರ ಅವರು ಚರ್ಚೆಗೆ ಬರಲಿ, ಅವರ ಹಿಂಬಾಲಕರಲ್ಲ ಎಂದರು.
ಸಿರಿಗೆರೆ ಶ್ರೀಗಳ ಆಶಯದಂತೆ 57 ಕೆರೆ ನೀರು ತುಂಬಿಸುವ ಯೋಜನೆಗೆ ಹರಪನಹಳ್ಳಿ ಶಾಸಕ ರಾಗಿದ್ದ ದಿ. ಎಂ.ಪಿ. ರವೀಂದ್ರ ಅವರೊಡನೆ ಸೇರಿ ಸಚಿವರು ವರಿಷ್ಠರ ಜೊತೆ ಸೇರಿ ಸಾಕಾರಗೊಳಿಸಲು ಮಾಜಿ ಶಾಸಕ ರಾಜೇಶ್ ಯತ್ನಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಹಾಗೂ ನಿರ್ವಹಣೆಯೂ ಹಾಲಿ ಶಾಸಕರಿಂದ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಕೇವಲ ಬಿಜೆಪಿ ಮಂಡಲ ಅಧ್ಯಕ್ಷರು ಮುಖಂಡರುಗಳು ಭಾಗವಹಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಸಂಸದರು ಹಾಗೂ ಶಾಸಕರ ನಡೆ ಶೋಭೆ ತರುವಂತಹದ್ದಲ್ಲ ಎಂದು ದೂರಿದರು.
ಮಾಜಿ ಶಾಸಕರ ಬಗ್ಗೆ ಜಿ.ಪಂ. ಸದಸ್ಯರ ಆರೋಪ ಸರಿಯಲ್ಲ. ಅವರು ಸ್ಥಳೀಯವಾಗಿ ಅಭಿವೃದ್ಧಿ ತೋರಿಸಲಿ. ಕನಸಿನ ಯೋಜನೆ ಎಂದು ಹೇಳುವ ಶಾಸಕರು ಭದ್ರಾ ಮೇಲ್ದಂಡೆ ಯೋಜನೆ ಮಾರ್ಗದ ಕುರಿತು ಸ್ಪಷ್ಟೀಕರಣ ನೀಡಲಿ. ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸಿಲ್ಲ . ನಮ್ಮ ಸಹಕಾರ ಸದಾ ಇದೆ ಎಂದರು.
ಮುಖಂಡ ಎಲ್.ಬಿ. ಭೈರೇಶ್ ಮಾತನಾಡಿ, ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಶಾಸಕರ ಹಿಂಬಾಲಕರು ಪರ್ಸೆಂಟೇಜ್ ಪಡೆಯುವ ಬಗ್ಗೆ ಆರೋಪ ಕೇಳಿಬರುತ್ತಿದೆ. ಎಂದು ದೂರಿದರು. ಶಾಸಕರ ಪರವಾಗಿ ಪತ್ರಿಕಾಗೋಷ್ಠಿ ನಡೆಸಿರುವ ಹಿಂಬಾಲಕರು ಮಾಜಿ ಶಾಸಕರ ವಿರುದ್ಧ ಹೇಳಿಕೆ ನೀಡಿ ಶಾಸಕ ಎಸ್.ವಿ. ರಾಮಚಂದ್ರ ಅವರ ಮನವೊಲಿಕೆ ಮಾಡಿ ಬರುವ ಜಿ.ಪಂ. ಚುನಾವಣೆಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ ಮಾತನಾಡಿ, ಶಾಸಕರ ಹಿಂಬಾಲಕರುಗಳು ಕ್ಷೇತ್ರದಲ್ಲಿ ವಾಸವಿಲ್ಲ . ಅವರು ದಾವಣಗೆರೆಯಿಂದ ವ್ಯವಹಾರಕ್ಕಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಕುಬೇಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ವೆಂಕಟೇಶ್, ಬಿ. ಲೋಕೇಶ್, ಗಿರೀಶ್ ಒಡೆಯರ್, ವೆಂಕಟೇಶ್ ಮಾಳಮ್ಮನಹಳ್ಳಿ, ರೇವಣ್ಣ, ಸಿ. ತಿಪ್ಪೇಸ್ವಾಮಿ, ಹನುಮಂತಪ್ಪ, ಆದರ್ಶ, ಆಜಾಮುಲ್ಲಾ, ಸೋಮಶೇಖರ್, ರಮೇಶ್, ವಿಜಯ್, ರೇಣುಕೇಶ್ ಇನ್ನಿತರರಿದ್ದರು.