ಅಧ್ಯಯನ ಅಭಿರುಚಿಯಿಂದ ಯಶಸ್ಸು ಸಾಧ್ಯ

‘ಮಲ್ಲಿಗೆ’ ‘ದಾಸವಾಳ’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಬಸವಪ್ರಭು ಶ್ರೀ

ದಾವಣಗೆರೆ, ಮಾ. 21 – ಗ್ರಂಥಗಳ ಅಧ್ಯಯನದ ಅಭಿರುಚಿ ಬೆಳೆಸಿಕೊಂಡರೆ ಯಶಸ್ಸು ದೊರೆಯುವ ಜೊತೆಗೆ, ಸಂಕಟ ಹಾಗೂ ಕಷ್ಟಗಳು ಬಂದಾಗ ಎದುರಿಸುವ ಸಾಮರ್ಥ್ಯವೂ ದೊರೆಯುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಜೆಂಬಿಗಿ ಮೃತ್ಯುಂಜಯ ಅವರ §ಮಲ್ಲಿಗೆ¬ ಮತ್ತು §ದಾಸವಾಳ¬ ಕೃತಿಗಳ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಧೀಮಂತರು ಗ್ರಂಥಗಳ ಅಧ್ಯಯನ, ಕೌಶಲ್ಯ ವೃದ್ಧಿ ಹಾಗೂ ಧ್ಯಾನಗಳಂತಹ ಕೆಲಸಗಳಲ್ಲಿ ತೊಡ ಗುತ್ತಾರೆ. ಸಮಯ ಸದುಪಯೋಗ ಮಾಡಿಕೊಳ್ಳುತ್ತಾರೆ. ಮತ್ತೊಂದೆಡೆ ಮೂರ್ಖರು ಜೂಜು, ಕುಡಿತ, ಮೋಜು, ಮಸ್ತಿಗಳಲ್ಲಿ ಸಮಯ ಹಾಳು ಮಾಡು ತ್ತಾರೆ. ಇಂತಹ ವ್ಯಸನಗಳಲ್ಲಿ ಕಾಲ ಕಳೆಯುವವರ ಜೀವನ ಪೂರ್ತಿ ಹಾಳಾಗುತ್ತದೆ, ಅಧೋಗತಿಗೆ ಹೋಗುತ್ತದೆ ಎಂದು ಶ್ರೀಗಳು ಎಚ್ಚರಿಸಿದರು.

ಪುಸ್ತಕ ಅಧ್ಯಯನ ಹಾಗೂ ಧ್ಯಾನದಲ್ಲಿ ತೊಡಗುವುದರಿಂದ ಪರಮಾನಂದ ಸಿಗುತ್ತದೆ. ಬಾಯಿ ರುಚಿ ಕ್ಷಣಿಕ. ಅಧ್ಯಯನ ರುಚಿ ಬೆಳೆಸಿ ಕೊಂಡರೆ, ಜೀವನ ಉದ್ಧಾರವಾಗುತ್ತದೆ. ಮನಸ್ಸಿಗೆ ಸಂತೋಷ ಸಿಗುವ ಜೊತೆಗೆ ಯಶಸ್ಸು ಮತ್ತು ಧ್ಯಾನವೂ ಪ್ರಾಪ್ತವಾಗುತ್ತದೆ ಎಂದವರು ಹೇಳಿದರು.

§ದಾಸವಾಳ¬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಲೇಷಿಯಾಗೆ ತೆರಳಿದ ಸಂದರ್ಭದಲ್ಲಿ ಜೆಂಬಿಗಿ ಮೃತ್ಯುಂಜಯ ಅವರು ಅಲ್ಲಿನ ರಾಷ್ಟ್ರ ಪುಷ್ಪವಾದ ದಾಸವಾಳದಿಂದ ಸ್ಫೂರ್ತಿ ಪಡೆದು ತಮ್ಮ ಕೃತಿಗೆ ಅದೇ ಹೆಸರಿಟ್ಟಿದ್ದಾರೆ. ಅವರು ಇನ್ನಷ್ಟು ಕೃತಿಗಳನ್ನು ಜನರಿಗೆ ತಲುಪಿಸಲಿ ಎಂದು ಆಶಿಸಿದರು.

ವೈದ್ಯ ಸಾಹಿತಿ ಡಾ. ಶಶಿಕಲಾ ಕೃಷ್ಣಮೂರ್ತಿ ಮಾತನಾಡಿ, ಬರವಣಿಗೆಯ ಕಲೆಯನ್ನು ಎಲ್ಲರೂ ಕಲಿಯಬಹುದು. ಕನಿಷ್ಠ ದಿನಚರಿಯಿಂದಾದರೂ ಬರವಣಿಗೆ ಆರಂಭಿಸಬೇಕು. ಇದು ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ ಎಂದರು.

ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಮಾತನಾಡಿ, ಕಾವ್ಯದಿಂದ ಮನಸ್ಸು ಆರೋಗ್ಯಕರವಾಗುತ್ತದೆ. ಸಂವೇದನೆ ಇದ್ದಾಗ ಮನಸ್ಸು ಮೌಲ್ಯಯುತವಾಗುತ್ತದೆ.  ಜೀವನದ ಅನುಭವದಿಂದ ಸಾಹಿತ್ಯವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ವಿಶಾಲವಾದ ಪ್ರಪಂಚ ಆಧುನಿಕ ತಂತ್ರಜ್ಞಾನದಿಂದ ಕಿರಿದಾಗುತ್ತಿದೆ. ಅದೇ ರೀತಿ ಸಾಹಿತ್ಯವೂ ಬದಲಾಗುತ್ತಿದೆ. ಮುಂದಿನ ದಿನ ಗಳಲ್ಲಿ ಪುಸ್ತಕಗಳೆಲ್ಲಾ ಮರೆಯಾಗಿ §ಇ – ಪುಸ್ತಕ¬ ಗಳೇ ಉಳಿಯಬಹುದು ಎಂದು ಹೇಳಿದರು.

ಲೆಕ್ಕಪರಿಶೋಧಕ ಅಥಣಿ ಎಸ್. ವೀರಣ್ಣ, ಅವರು §ಮಲ್ಲಿಗೆ¬ ಕವನ ಸಂಕಲನ ಬಿಡುಗಡೆ ಮಾಡಿದರು. ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನಿರ್ದೇಶಕಿ ಭಾರತಿ ಕುಮಾರ್ ಜೆಂಬಿಗಿ, ಪ್ರಾಧ್ಯಾಪಕ ಡಾ. ಪ್ರಕಾಶ್ ಹಲಗೇರಿ ಉಪಸ್ಥಿತರಿ ದ್ದರು. ಕೃತಿಕಾರ ಜೆಂಬಿಗಿ ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಮ್ಮ ಮೃತ್ಯುಂಜಯ ಪ್ರಾರ್ಥಿಸಿದರೆ, ಜೆಂಬಿಗಿ ಕೊಟ್ರೇಶ್ ಸ್ವಾಗತಿಸಿದರು. ಕೆ.ಎನ್. ಸ್ವಾಮಿ ನಿರೂಪಿಸಿದರೆ, ಜೆ.ವಿ. ಕರಿಬಸಮ್ಮ ವಂದಿಸಿದರು.

error: Content is protected !!