ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ವನಮಾಲ ಸಂಪನ್ನಕುಮಾರ್
ದಾವಣಗೆರೆ, ಮಾ. 20 – ಮಹಿಳೆಯು ಕೌಟುಂಬಿಕ ವ್ಯವಸ್ಥೆ ಹಾಗೂ ಇತಿ ಮಿತಿಗಳ ನಡುವೆಯೂ ಸಾಹಿತ್ಯದಲ್ಲಿ ಪುರುಷರಿಗೆ ಸಮನಾದ ಹಾಗೂ ವಿಶೇಷ ದೃಷ್ಟಿಕೋನದ ಆಲೋಚನೆ ಮತ್ತು ಅನುಭವ ಹೊಂದಿರುವುದಾಗಿ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಲೇಖಕಿರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, §ಪೌರ್ಣಿಮೆ’ ಕವನ ಸಂಕಲನ ಮತ್ತು §ಮಲೆನಾಡಿನ ಮಡಿಲಲ್ಲಿ – ಹೊರನಾಡಿನ ಹೊನಲಲ್ಲಿ’ ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಹಿತ್ಯವನ್ನು ರಚಿಸುವುದಷ್ಟೇ ಅಲ್ಲದೇ, ಓದುವುದರಿಂದ ವಿಚಾರಧಾರೆ ಸ್ಪಷ್ಟವಾಗುತ್ತದೆ. ಜೀವನ ಪ್ರೀತಿ – ಪ್ರಕೃತಿ ಪ್ರೀತಿ ಸಾಹಿತ್ಯದಿಂದ ಸಾಧ್ಯ ಎಂದು ತಿಳಿಸಿದರು.
ಮಹಿಳೆಗೆ ಈಗ ವಿದ್ಯೆ ಹಾಗೂ ಉದ್ಯೋಗ ದೊರೆತಿದೆ. ಮಕ್ಕಳನ್ನು ಪಾಲಿಸಿ, ಕೌಟುಂಬಿಕ ವ್ಯವಸ್ಥೆಯನ್ನು ನಿರ್ವಹಿಸುತ್ತಲೇ ಮಹಿಳೆ ಮುಂದುವರೆಯು ತ್ತಿರುವುದರಿಂದ, ಸಮಾಜಕ್ಕೆ ಪುರುಷರಿಗಿಂತ ಹೆಚ್ಚು ಕೊಡುಗೆ ನೀಡುತ್ತಿದ್ದಾಳೆ ಎಂದವರು ಹೇಳಿದರು.
ಗಂಡು ಹಾಗೂ ಹೆಣ್ಣಿನ ನಡುವೆ ದೇಹ ರಚನೆ ಹಾಗೂ ಮಾನಸಿಕ ಭಿನ್ನತೆ ಇದೆ. ಹೀಗಾಗಿ ಉಭಯರು ಪರಸ್ಪರ ಅನುಸರಿಸಬೇಕಿಲ್ಲ. ಆದರೆ, ಸಾಮರಸ್ಯ ಹೊಂದಬೇಕಿದೆ. ವಿರೋಧಾಭಾಸದ ಬದಲು ವಿಶೇಷತೆಯನ್ನು ಪೋಷಿಸಬೇಕಿದೆ ಎಂದು ವನಮಾಲ ಅಭಿಪ್ರಾಯ ಪಟ್ಟರು.
ಲೇಖಕಿ ವೀಣಾ ಕೃಷ್ಣಮೂರ್ತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ್, ಜಿಲ್ಲಾ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಸಾಹಿತಿ ಅರುಂಧತಿ ರಮೇಶ್, ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಉಪಸ್ಥಿತರಿದ್ದರು.
ಕುಸುಮ ಲೋಕೇಶ್ ಸ್ವಾಗತಿಸಿದರೆ, ಸುನಿತಾ ಪ್ರಕಾಶ್ ನಿರೂಪಿಸಿದರು. ಶೈಲಜಾ ಪಾಟೀಲ್ ವಂದಿಸಿದರು.