ದಾವಣಗೆರೆ, ಮಾ. 21- ಭದ್ರಾ ಜಲಾಶಯದಲ್ಲಿ ಇರುವ ನೀರು ಬೇಸಿಗೆ ಬೆಳೆಗೆ ಲೆಕ್ಕ ಹಾಕಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ಭದ್ರಾ ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಿ ಪ್ರಕಟಣೆ ಹೊರಡಿಸಿರುವುದನ್ನು ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ತೀವ್ರವಾಗಿ ವಿರೋಧಿಸಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ 1.60 ಟಿಎಂಸಿ ನೀರನ್ನು, ದಿನನಿತ್ಯ 1200 ಕ್ಯೂಸೆಕ್ಸ್ ನೀರನ್ನು 2021 ರ ಮಾರ್ಚ್ 18 ರಿಂದ 2021ರ ಏ.1 ರ ವರೆಗೆ ಹರಿಸಲು ಆದೇಶ ಮಾಡಿರುವುದು ಭದ್ರಾ ಅಚ್ಚುಕಟ್ಟುದಾರರ ಹಿತ ಕಾಪಾಡುವುದನ್ನು ಸರ್ಕಾರ ಮರೆತಂತೆ ಕಾಣುತ್ತದೆ ಎಂದು ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಭದ್ರಾ ಜಲಾಶಯದಲ್ಲಿ ಇರುವ ನೀರು ಬೆಳೆದು ನಿಂತಿರುವ ಬೆಳೆಗೆ ಅರ್ಧ ಟಿಎಂಸಿ. ಕಡಿಮೆ ಬರುವುದರಿಂದ ತಾವು ತಕ್ಷಣ ನೀರು ಹರಿಸುವು ದನ್ನು ನಿಲ್ಲಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರನ್ನು ಉಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಸರ್ಕಾರ ತನ್ನ ಮೊಂಡುತನದಿಂದ ನದಿಗೆ ನೀರು ಹರಿಸಿದ್ದಲ್ಲಿ ಅಚ್ಚುಕಟ್ಟುದಾರರು ಬೆಳೆದ ಕೋಟ್ಯಾಂತರ ರೂಪಾಯಿಯ ಬೆಳೆಯು ಕೈಗೆ ಸಿಗದೇ ಇದ್ದರೆ ರೈತರು ವಿಷ ಕುಡಿಯುವ ಸಂದರ್ಭ ಬಂದರೂ ಬರಬಹುದು. ಇದಕ್ಕೆ ಸರ್ಕಾರವೇ ನೇರ ಹೊಣೆ ಆಗಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.