ಜಗಳೂರು, ಮಾ.21- ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಎಸ್. ವಿ. ರಾಮಚಂದ್ರ ಅವರ ನೇತೃತ್ವದಲ್ಲಿ ರೂ. 50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.
ತಾಲ್ಲೂಕಿನ ಕಾಮಗೇತನಹಳ್ಳಿ, ಚಿಕ್ಕಬಂಟನಹಳ್ಳಿ ಗ್ರಾಮದ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಜಿಲ್ಲಾ ಪಂಚಾಯತ್ ದಾವಣಗೆರೆ, ತಾಲ್ಲೂಕು ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳ ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ವಿರೋಧ ಪಕ್ಷದವರು ಅಭಿವೃದ್ದಿ ಕೆಲಸಗಳಿಗೆ ಸಹಕಾರ ನೀಡಬೇಕು, ಕೆಲಸ ಮಾಡದಿ ದ್ದರೆ ಟೀಕಿಸಬೇಕು. ವಿನಾಕಾರಣ ಆರೋಪಗಳು ಸರಿಯಲ್ಲ. ವಿರೋಧ ಪಕ್ಷದವರು ಆಪಾದನೆ ಮಾಡುವುದು ಸುಲಭ, ಸಹಿಸಿಕೊಳ್ಳುವುದು ಕಷ್ಟಕರ ಎಂದು ತಿರುಗೇಟು ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಲ್ಯಾಂಡ್ ಅಕ್ವಿಜೇಷನ್ ಮಾಡಿಕೊಡಿ ಎಂದು ಮಾಜಿ ಶಾಸಕರಿಗೆ ತಿಳಿಸಿದ್ದರೂ ಕಿವಿಗೊಡಲಿಲ್ಲ. ಇದೀಗ ಪತ್ರಿಕಾ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ. ಕೆಲ ವೇಳೆ ಕಾಮಗಾರಿಗಳು ವಿಳಂಬ ವಾಗಬಹುದು. ಆದರೆ ಅಭಿವೃದ್ದಿ ಕೆಲಸಗಳು ಮಾತ್ರ ಜರುಗುತ್ತವೆ. ಏಕ ಕಾಲ ದಲ್ಲಿ ಎಲ್ಲಾ ಕಾರ್ಯಗಳನ್ನು ಪೂರೈ ಸಲು ಸಾಧ್ಯವಿಲ್ಲ, ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಕಟ್ಟಡದ ಕಾಮಗಾರಿ ಗುಣಮಟ್ಟದ್ದಾಗಲಿ, ಒಂದು ವರ್ಷದೊಳಗೆ ಕಟ್ಟಡ ಪೂರ್ಣಗೊಳ್ಳಲಿ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗಡಿ ಗ್ರಾಮದಲ್ಲಿ ವಸತಿಶಾಲೆ ನಿರ್ಮಾಣವಾಗುತ್ತಿರುವುದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ತಳಹದಿಯಾಗಲಿದೆ. ಸ್ಥಳಿಯ ಪೋಷಕರು ಸದ್ಬಳಕೆ ಮಾಡಿಕೊಂಡು ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಸಹಕಾರದಿಂದ ತಾಲ್ಲೂಕಿಗೆ 2 ವಸತಿ ಶಾಲೆಗಳನ್ನು ಮಂಜೂರಾತಿ ಮಾಡಿಸಿಕೊಟ್ಟ ಫಲವಾಗಿ ಶಂಕುಸ್ಥಾಪನೆ ಹಂತ ತಲುಪಿದ್ದು, ಹಿಂದುಳಿದ ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಗಡಿ ಗ್ರಾಮದ ಬಳಿ 50 ಕೋಟಿ ವೆಚ್ಚದಲ್ಲಿ ಏಕಲವ್ಯ ವಸತಿ ಶಾಲೆಯ ಮಂಜೂರಾತಿ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು, ಕೋವಿಡ್ ಇಳಿಮುಖವಾದ ನಂತರ ಪ್ರಧಾನಿ ಮೋದೀಜಿ ಅವರನ್ನು ಶಂಕುಸ್ಥಾಪನೆಗೆ ಆಹ್ವಾನಿಸಲಾಗುವುದು ಎಂದರು.
ಕೊರೊನಾ ಮಹಾಮಾರಿಯಿಂದ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮಾಸ್ಕ್, ಸಾನಿಟೈಸರ್ ಬಳಕೆ ಕಡ್ಡಾಯವಾಗಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ, ಸದಸ್ಯ ಎಸ್.ಕೆ. ಮಂಜುನಾಥ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್, ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಜಿ.ಪಂ. ಮಾಜಿ ಸದಸ್ಯ ನಾಗರಾಜ್, ಸೊಕ್ಕೆ ತಿಪ್ಪೇಸ್ವಾಮಿ, ಮುಖಂಡರಾದ ಬಿಸ್ತುವಳ್ಳಿ ಬಾಬು, ಓಬಣ್ಣ, ರೇವಣ್ಣ, ಕುಮಾರ್, ಗುತ್ತಿಗೆದಾರ ದೀಪಕ್ ಪಟೇಲ್, ಪಿಡಬ್ಲ್ಯೂಡಿ ಎಇಇ ರುದ್ರಪ್ಪ, ತಾ.ಪಂ. ಇಓ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಪ್ರಾಂಶುಪಾಲ ಕಲ್ಲೇಶ್, ನಾಗರಾಜ್ ಸೇರಿದಂತೆ, ಗ್ರಾ.ಪಂ ಸದಸ್ಯರುಗಳು ಗ್ರಾಮಸ್ಥರು ಭಾಗವಹಿಸಿದ್ದರು.