ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯ ಡಾ. ಗಂಗಾಧರ ವರ್ಮ ವಿಶ್ಲೇಷಣೆ
ದಾವಣಗೆರೆ, ಜೂ.14- ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 7 ದಿನಗಳ ಉಚಿತ ಆನ್‍ಲೈನ್ ಯೋಗ ತರಬೇತಿ ಶಿಬಿರವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗವೆನ್ನುವುದು ನಮ್ಮ ಪುರಾತನ ಚಿಕಿತ್ಸಾ ಪದ್ಧತಿ ಮತ್ತು ಪುರಾತನ ತತ್ವಶಾಸ್ತ್ರ. ಇದು ಒಂದು ಜೀವನ ಶೈಲಿ ಹಾಗೂ ಕಲೆ. ಒಬ್ಬ ಮನುಷ್ಯನ ಸರ್ವೋನ್ನತ ಏಳಿಗೆಗೆ ಇದು ತುಂಬಾ ಸಹಕಾರಿ. ಯೋಗವು ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲಾ ಪಂಥದ ಜನರೂ ಒಂದಲ್ಲಾ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ನಿರ್ವಾಹಕ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯ ಡಾ. ಗಂಗಾಧರ ವರ್ಮ ಮಾತನಾಡಿ, ಯೋಗವು ಭಾರತದ 4,000 ವರ್ಷಗಳಷ್ಟು ಹಿಂದಿನ ಪುರಾತನ ತತ್ವ. ಯೋಗದ ಪ್ರಕಾರ ದೇಹವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶ ಎಂದು ಹೇಳಿದರು.
ಯೋಗದ ಪ್ರಕಾರ ಎಲ್ಲಾ ರೀತಿಯ ತೊಂದರೆಗಳು ಮಾನವನಿಗೆ ವಿಜ್ಞಾನಮಯ ಕೋಶದಲ್ಲಿ ಉದ್ಭವಿಸುತ್ತವೆ. ಆದರೆ ಇವುಗಳು ಕಾಣಿಸಿಕೊಳ್ಳುವುದು ಮನೋಮಯ ಕೋಶದಲ್ಲಿ. ಮಾನಸಿಕ ಉದ್ವೇಗ ಅಥವಾ ಮಾನಸಿಕ ಒತ್ತಡವು ಮನಸ್ಸಿನ ಸಮತೋಲನವನ್ನು ಏರುಪೇರು ಮಾಡುತ್ತದೆ. ಮಾನಸಿಕ ಉದ್ವೇಗವು ತೀವ್ರವಾದ ಬೇಕು-ಬೇಡಗಳು, ರಾಗ-ದ್ವೇಷಗಳು, ಇಚ್ಛೆ-ನಿಚ್ಛೆಗಳಿಂದ ಕಾಣಿಸಿಕೊಳ್ಳುತ್ತವೆ. ಈ ಮನೋಮಯ ಕೋಶದ ಅಸಮತೋಲನವು ಪ್ರಾಣಮಯ ಕೋಶದ ಮೇಲೆ ಪ್ರಭಾವ ಬೀರಿ ಅಲ್ಲಿನ ಪ್ರಾಣದ ಹರಿಯುವಿಕೆಯಲ್ಲಿ ಅಡ್ಡಿ, ಅಡಚಣೆಯನ್ನುಂಟು ಮಾಡುತ್ತದೆ. ಈ ಅಡಚಣೆಯು ಅನ್ನಮಯ ಕೋಶದಲ್ಲಿ ವ್ಯಾಧಿ ಯಾಗಿ ಕಾಣಿಸಿಕೊಳ್ಳುತ್ತದೆ. ವಿಜ್ಞಾನಮಯ ಕೋಶದಲ್ಲಿ ಉದ್ಭವಗೊಂಡು ಮನೋಮಯ ಕೋಶದಲ್ಲಿ ಅಭಿವೃದ್ಧಿಗೊಳ್ಳುವ
ಇದನ್ನು ಯೋಗದ ಪರಿಭಾಷೆಯಲ್ಲಿ `ಆಧಿ’ ಎಂದು ಕರೆ ಯುತ್ತಾರೆ. ಈ ಆಧಿಯನ್ನು ದೂರ ಮಾಡಲು ನಾವು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಯೋಗವೆಂಬುದು ಕೇವಲ ವ್ಯಾಯಾಮವಲ್ಲ, ಇದು ಒಂದು ಜೀವನ ಶೈಲಿ. ಪತಂಜಲಿ ಮುನಿಯು ಯೋಗವನ್ನು ಅಷ್ಟಾಂಗ ಯೋಗದ ಮೂಲಕ ವಿಭಾಗಿಸಿದ್ದಾರೆ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳು. ಪತಂಜಲಿಯ ಅಷ್ಟಾಂಗ ಯೋಗದ ಎಂಟು ಮೆಟ್ಟಿಲುಗಳನ್ನು ಹತ್ತುವ ಸಲುವಾಗಿ ಸಾಧಕನು ಅಭ್ಯಾಸ-ವೈರಾಗ್ಯಗಳನ್ನು ರೂಢಿಸಿಕೊಂಡು ಚಿತ್ತವನ್ನು ಏಕಾಗ್ರ ಗೊಳಿಸಲು, ಎಲ್ಲ ದಿಕ್ಕುಗಳಲ್ಲಿಯೂ ಹರಿದುಹಂಚಿ ಹೋಗುವ ಮನಃ ಶಕ್ತಿಯನ್ನು ಸಂಚಯಿಸಲು ಯತ್ನಿಸಬೇಕು ಎಂದು ತಿಳಿಸಿದರು.
ಪ್ರಹ್ಲಾದ್ ಹಾಗೂ ನಗರದ 95 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಡಿ. ಎಂ. ರತ್ನ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.