ಹೊನ್ನಾಳಿ, ಜೂ.14- ತಾಲ್ಲೂಕಿನಲ್ಲಿ 10ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಕಂಡುಬಂದ ಹಳ್ಳಿಗಳನ್ನು ಸೀಲ್‍ಡೌನ್ ಮಾಡುತ್ತಿದ್ದು, ತಾಲ್ಲೂಕಿನ ಕುಳಗಟ್ಟೆ ಗ್ರಾಮ ಇಂದು ಸೀಲ್‍ಡೌನ್ ಆಗಿದೆ.
ತಾಲ್ಲೂಕಿನ ಕೂಲಂಬಿ, ಗೊಲ್ಲರಹಳ್ಳಿ, ಕುಳಗಟ್ಟೆ, ಐನೂರು, ಹನುಮನಹಳ್ಳಿ ಗ್ರಾಮಗಳು ಸೀಲ್‍ಡೌನ್ ಆಗಿದೆ. ಸಾಸ್ವೆಹಳ್ಳಿಯಲ್ಲಿ 7ಕ್ಕೂ ಹೆಚ್ಚು ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಿಲ್ಲ ಎಂದು ತಹಶೀಲ್ದಾರ್ ಬಸವನಗೌಡ ಕೋಟೂರ್ ತಿಳಿಸಿದರು.
ನ್ಯಾಮತಿ ತಾಲ್ಲೂಕಿನ ಪಲವನ ಹಳ್ಳಿ, ಕುಂಕೋವ, ಸುರಹೊನ್ನೆ ಗ್ರಾಮ ಗಳು ಇದೇ ರೀತಿ ಸೀಲ್‍ಡೌನ್ ಆಗಿದ್ದು, ಸೀಲ್‍ಡೌನ್ ನೀತಿ ನಿಯಮವನ್ನು ಅಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆ ಇನ್ನು ಇರುವ ಕಾರಣ ಮದುವೆ, ಧಾರ್ಮಿಕ ಕಾರ್ಯಕ್ರಮ ಮತ್ತಿತರೆ ಸಮಾರಂಭ ಗಳಿಗೆ ಕಡ್ಡಾಯವಾಗಿ ನೀತಿ ನಿಯಮ ಮುಂದುವರೆದಿರುತ್ತದೆ ಎಂದರು.
ಹೆಚ್ಚು ಕೊರೊನಾ ಟೆಸ್ಟ್ ನಡೆಸುತ್ತಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ತಾಲ್ಲೂಕಿನಲ್ಲಿ ಕಡಿಮೆ ಕಂಡುಬರುತ್ತಿವೆ. ಜೂನ್ 14ರಂದು ನೂರು ಜನರಿಗೆ ನಡೆಸಿದ ತಪಾಸಣೆ ಯಲ್ಲಿ ಕೇವಲ 6 ಜನರಲ್ಲಿ ಮಾತ್ರ ಪಾಸಿಟಿವ್ ಕಂಡುಬಂದಿದೆ ಎಂದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಕುಳಗಟ್ಟೆ ರಂಗನಾಥ್ ಮಾತನಾಡಿ, ಕುಳಗಟ್ಟೆ ಗ್ರಾಮದ ಎರಡು ರಸ್ತೆಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಸೀಲ್‍ಡೌನ್ ಮಾಡಲಾಗಿದೆ ಎಂದು ಜನತಾವಾಣಿಗೆ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಪಿಡಿಓ ಭಾರತಿ, ಪಂಚಾಯಿತಿ ಸದಸ್ಯ ಹಾಲೇಶ್, ಬಸಯ್ಯ, ರಂಗನಾಥ್ ಮತ್ತಿತರರು ಇದ್ದರು.