ಸರ್ಕಾರಿ ಜಾಗಗಳ ಒತ್ತುವರಿ ತೆರವುಗೊಳಿಸಲು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮನವಿ

ದಾವಣಗೆರೆ, ಮಾ.19- ನಗರ ವ್ಯಾಪ್ತಿಯಲ್ಲಿ ಹಲವರು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಪಾಲಿಕೆ ಹಾಗೂ ದೂಡಾ ಆಯುಕ್ತರು ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟ ಹೇಳಿದೆ.

ಈ ಕಾರ್ಯಕ್ಕೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಬೆಂಬಲವೂ ಇದೆ.ಕೆಲವು ಅಧಿಕಾರಿಗಳು ಹಾಗೂ ಕೆಲ ಪಾಲಿಕೆ ಸದಸ್ಯರು ಸಾರ್ವಜನಿಕ ಹಿತಾಸಕ್ತಿಗಿಂತ ಸ್ವ-ಹಿತಾಸಕ್ತಿಗೆ ಹೆಚ್ಚು ಒತ್ತು ನೀಡಿರುವುದರಿಂದ ಇಲ್ಲಿ ತನಕ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯದಲ್ಲಿ ಕಾಣುತ್ತಿದೆ. ದಾರಿ ತಪ್ಪಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೂಡಲೇ ಸರಿದಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಒಕ್ಕೂಟ ಮನವಿ ಮಾಡಿದೆ.

ಕಳೆದ 6 ತಿಂಗಳಿನಿಂದ ಪಾಲಿಕೆ ಹಾಗೂ ದೂಡಾ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ. ಒತ್ತುವರಿ ಮಾಡಿರುವ ಕಟ್ಟಡ ಮಾಲೀಕರನ್ನು ಬೆದರಿಸಿ, ತಮ್ಮ ಕಡೆ ಸಂಧಾನಕ್ಕೆ ಬರುವ ತಂತ್ರಗಾರಿಕೆ ಮಾಡಲಾಗುತ್ತಿದೆ ಎಂಬ ಸಂಶಯ ಕಾಡುತ್ತಿದೆ. ಆ ಮೂಲಕ ಸಾರ್ವಜನಿಕ ಹಿತಾಸಕ್ತಿ ಬದಿಗೊತ್ತಿ ಸ್ವ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಉದ್ಯಾನವನ, ರಾಜಕಾಲುವೆ, ಹೈಟೆನ್ಷನ್ ತಂತಿ ಕೆಳ ಭಾಗದಲ್ಲಿ ಹಲವರು ಒತ್ತುವರಿ ಮಾಡಿಕೊಂಡಿದ್ದು, ತಮಗೆ ಬೇಕಾದವರಿಗೆ ನೋಟೀಸ್ ನೀಡಿ ನ್ಯಾಯಾಲಯಕ್ಕೆ ಹೋಗುವಂತೆ ಪರೋಕ್ಷವಾಗಿ ಸಹಕಾರ ನೀಡಲಾಗುತ್ತಿದೆ. ಬೇಡವಾದವರಿಗೆ ಕಾರ್ಯಾಚರಣೆ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಇಂತಹ ಚಟುವಟಿಕೆಗಳಿಗೆ ಜಿಲ್ಲಾಧಿಕಾರಿಗಳು ಅಂಕುಶ ಹಾಕಬೇಕು. ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಒತ್ತುವರಿ ಕಾರ್ಯಾಚರಣೆ ಒಂದು ಭಾಗದಿಂದ ಸಮಗ್ರವಾಗಿ ಪ್ರಾರಂಭಿಸಬೇಕು. ತಾರತಮ್ಯ ನೀತಿ ಅನುಸರಿಸದೆ, ಪಾರದರ್ಶಕತೆ ಕಾಪಾಡಬೇಕು. ನಗರದ ಹಲವೆಡೆ ರಾಜಕಾಲುವೆ, ಉದ್ಯಾನ, ಹೈ-ಟೆನ್ಷನ್ ಕೆಳಗಿನ ಜಾಗ, ಸರ್ಕಾರಿ ಜಾಗಗಳ ಒತ್ತುವರಿ ತೆರವಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಮುಂದಿನ ಕೆಲವೇ ದಿನಗಳಲ್ಲಿ ದಾಖಲೆ ಸಹಿತ ಹಂತ ಹಂತವಾಗಿ ಹೋರಾಟಕ್ಕಿಳಿಯಲಿದೆ ಎಂದು ಗೌರವಾಧ್ಯಕ್ಷ ಕೆ.ಜಿ. ಯಲ್ಲಪ್ಪ, ಅಧ್ಯಕ್ಷ  ಎನ್.ಹೆಚ್. ಹಾಲೇಶ್ ಹಾಗೂ ಕಾರ್ಯಾಧ್ಯಕ್ಷ ವಿ. ಅವಿನಾಶ್ ಅಭಿ ಎಚ್ಚರಿಸಿದ್ದಾರೆ.

error: Content is protected !!