ಹೊನ್ನಾಳಿ, ಮಾ.19- ದ್ವಿತೀಯ ಧರ್ಮಸ್ಥಳವೆಂದೇ ಖ್ಯಾತಿಯಾಗಿರುವ, ತಾಲ್ಲೂಕಿನ ಪ್ರಸಿದ್ಧ `ಎ’ ಗ್ರೇಡ್ ಮುಜ ರಾಯಿ ದೇವಸ್ಥಾನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಸಿದ್ದು, 30,40,256 ರೂಪಾಯಿ ಹಣ ಸಂಗ್ರಹವಾಗಿದೆ.
ತಹಸೀಲ್ದಾರ್ ಬಸನಗೌಡ ಕೋಟೂರ, ತರಬೇತಿ ಉಪ ವಿಭಾಗಾಧಿಕಾರಿ ವೀರೇಶ್ಕುಮಾರ್, ಪ್ರಧಾನ ಅರ್ಚಕ ಎಸ್. ರಾಜುಸ್ವಾಮಿ ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ಇಂದು ನಡೆಯಿತು.
ದೇವಸ್ಥಾನದ ಗೋಪುರ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 50 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ, ಊಟದ ಹಾಲ್ ಕೂಡಾ ನಿರ್ಮಾಣಗೊಂಡಿದೆ ಎಂದು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ವಿವರಿಸಿದರು.
ಪ್ರಭಾರ ರಾಜಸ್ವ ನಿರೀಕ್ಷಕ ಕೆ. ಮುನೇಶ್, ಮುಜ ರಾಯಿ ಇಲಾಖೆಯ ವಿಷಯ ನಿರ್ವಾಹಕಿ ರೇಣುಕಾ ಶಿವನ ಗೌಡರ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಶೋಕ್ನಾಯ್ಕ, ಎಚ್.ಆರ್. ಬಸವರಾಜ್, ಶಿಲ್ಪಾ, ರಮೇಶ್, ಭರಮಪ್ಪ, ಪ್ರಭಾಕರ್, ಕಾಜೋಲ್, ಚಂದ್ರಕಲಾ, ಅನಿತಾ, ಮಂಜು ನಾಥ್, ಗಿರೀಶ್, ವೀರೇಶ್, ಅಜಯ್ಕುಮಾರ್, ಮಹೇಂದ್ರಕುಮಾರ್, ನಾಗರಾಜ್, ಪ್ರಧಾನ ಅರ್ಚಕ ಎಸ್. ರಾಜುಸ್ವಾಮಿ, ಹೊನ್ನಾಳಿ ಕೆನರಾ ಬ್ಯಾಂಕ್ ಸಿಬ್ಬಂದಿ ರಾಮಣ್ಣ, ಯಶವಂತ್, ದೇವಸ್ಥಾನ ಸಮಿತಿಯ ಪದಾಧಿಕಾ ರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ದೇವರಿಗೊಂದು ಪತ್ರವ ಬರೆದು….
ಹೊನ್ನಾಳಿ, ಮಾ.19- ವಿದ್ಯಾರ್ಥಿನಿಯೊಬ್ಬಳು ತನಗೆ ಉನ್ನತ ವಿದ್ಯಾಭ್ಯಾಸದಲ್ಲಿ ಫ್ರೀ ಸೀಟು ಸಿಗುವಂತೆ ಕೋರಿ ಸುಂಕದಕಟ್ಟಿ ಮಂಜುನಾಥ ಸ್ವಾಮಿ ದೇವಸ್ಥಾನದ ಹುಂಡಿಗೆ ಒಂದೇ ರೀತಿಯ ಎರಡು ಪತ್ರಗಳ ಮೂಲಕ ನಿವೇದನೆ ಮಾಡಿಕೊಂಡಿದ್ದಾಳೆ.
ದೇವರು ಒಂದು ಪತ್ರ ಗಮನಿಸದಿದ್ದರೂ ಮತ್ತೊಂದು ಪತ್ರವನ್ನಾದರೂ ಗಮನಿಸಲಿ ಎಂಬುದು ವಿದ್ಯಾರ್ಥಿನಿಯ ಅಭಿಪ್ರಾಯವಾಗಿರಬಹುದು. ಫ್ರೀ ಎಂಬಿಬಿಎಸ್ ಸೀಟು ದಾವಣಗೆರೆ ಅಥವಾ ಶಿವಮೊಗ್ಗದಲ್ಲೇ ಅನುಗ್ರಹಿಸು ಎಂಬುದು ಪತ್ರದ ಸಾರಾಂಶವಾಗಿತ್ತು.