ಪ್ರಸ್ತುತ ದಿನಮಾನಗಳಲ್ಲಿ ಗುಣ ಗೌಣವಾಗಿ ಹಣ ದೊಡ್ಡದಾಗಿದೆ

ಸಾಣೇಹಳ್ಳಿ ಶ್ರೀ ಬೇಸರ

ಮಲೇಬೆನ್ನೂರು, ಮಾ.19- ಇವತ್ತಿನ ದಿನಮಾನಗಳಲ್ಲಿ ಗುಣ ಗೌಣವಾಗಿ ಹಣ ದೊಡ್ಡದಾಗಿದೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಅವರು ಶುಕ್ರವಾರ ನಿಟ್ಟೂರು ಗ್ರಾಮ ದಲ್ಲಿ ಹಮ್ಮಿಕೊಂಡಿದ್ದ ಇಟಗಿ ಮಹೇಶ್ವರಪ್ಪ ಅವರ ಶ್ರದ್ಧಾಂಜಲಿ ಹಾಗೂ ಸರ್ವಶರಣರ ಸಮ್ಮೇಳನ ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿ, ಆಶೀರ್ವಚನ ನೀಡಿದರು.

ಮನುಷ್ಯ ಸದಾ ಹರಿಯುವ ನದಿಯಂತಿರ ಬೇಕು. ಜೇನನ್ನು ಕೊಡುವ ಜೇನಿನ ಹುಳುವಿ ನಂತಿರಬೇಕು. ಕೋಗಿಲೆ ಬಹಳ ಮಧುರವಾಗಿ ಹಾಡುವಂತಿರಬೇಕು. ನಾಟಿ ಹಸುವಿನಂತಿರ ಬೇಕೆಂದು ಶ್ರೀಗಳು ಹೇಳಿದರು.

ದೊಡ್ಡ ಮನೆ, ಬಂಗಲೆ, ವಾಹನ, ಒಳ್ಳೆಯ ಬಟ್ಟೆಗಳಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಅವನ ರೀತಿ, ನೀತಿಗಳು ಚೆನ್ನಾಗಿದ್ದರೆ ಅವುಗಳೇ ಒಳ್ಳೆಯ ಸ್ಥಾನಮಾನಗಳನ್ನು ತಂದುಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯ ಸತ್ಯ, ಶುದ್ಧ ಕಾಯಕ, ಶ್ರದ್ಧೆ ಹಾಗೂ ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿಟ್ಟೂರಿನ ಇಟಗಿ ಮಹೇಶ್ವರಪ್ಪನವರು ಸಾಗಿ ಬಂದಿದ್ದ ರಿಂದ ಇವತ್ತು ನಾವೆಲ್ಲರೂ ಸೇರಿ ಅವರ ಸೇವೆಯನ್ನು ಸ್ಮರಿ ಸುತ್ತಿದ್ದೇವೆ. ಮಕ್ಕಳನ್ನು ಡಾಕ್ಟರ್‌, ಇಂಜಿನಿಯರ್‌, ಪೊಲೀಸ್‌ ಮಾಡಿದರೆ ಸಾಧನೆಯಲ್ಲ. ಅವರನ್ನು ಮನುಷ್ಯರನ್ನಾಗಿ ಮಾಡುವ ಸಾಂಸ್ಕೃತಿಕ, ಧಾರ್ಮಿಕ ಹಿನ್ನೆಲೆಯುಳ್ಳ ಉತ್ತಮ ಸಂಸ್ಕಾರ ಕಲಿಸಿ ಎಂದು ಸ್ವಾಮೀಜಿ ಕರೆ ನೀಡಿದರು.

ಶರಣ ತತ್ವ ಪಾಲಿಸುವವರು ದುಶ್ಚಟಗಳಿಗೆ ದಾಸರಾಗುವುದಿಲ್ಲ. ಅದಕ್ಕಾಗಿ ನಾವು ಸಾಣೇಹಳ್ಳಿಯಲ್ಲಿ ಪ್ರತಿ ತಿಂಗಳು 5 ರಂದು ಸಾಮೂಹಿಕ ಇಷ್ಟಲಿಂಗ ದೀಕ್ಷೆ ನೀಡುತ್ತಿದ್ದೇವೆ.

ಮಕ್ಕಳಿಗೂ ಇಷ್ಟಲಿಂಗ ದೀಕ್ಷೆ ನೀಡಿ ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಿ ಎಂದ ಶ್ರೀಗಳು, ಕುಂಬಳೂರಿನಲ್ಲಿ ಶ್ರೀ ಶಿವಾನಂದ ಗುರೂಜಿ ಅವರು ಬಸವ ಗುರುಕುಲ ಶಾಲೆಯನ್ನು ಕಟ್ಟಿ ಬೆಳೆಸಿ, ಸಿರಿಗೆರೆ ಮಠಕ್ಕೆ ಬಿಟ್ಟುಕೊಟ್ಟಿದ್ದಾರೆ. 

ಅಲ್ಲಿಗೆ ಅವಶ್ಯವಿರುವ ಶಾಲಾ ಕೊಠಡಿಗಳನ್ನು ಇಟಗಿ ಮಹೇಶ್ವರಪ್ಪನವರ ಸ್ಮರಣಾರ್ಥ ಅವರ ಮಕ್ಕಳು ನಿರ್ಮಿಸಿಕೊಡಲಿ ಎಂದು ಶ್ರೀಗಳು ಹೇಳಿದರು. ರೈತರು ಏಕ ಬೆಳೆಗೆ ಮಾರುಹೋಗದೆ, ವಿವಿಧ ಬೆಳೆ ಬೆಳೆಯಬೇಕು. ಆದ್ದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಸಿರಿಧಾನ್ಯ ಗಳನ್ನು ಬಳಕೆ ಮಾಡಲು ಅವಕಾಶ ಸಿಗುತ್ತದೆ ಎಂದರು.

ಸಾಹಿತಿ ಎಸ್‌.ಟಿ. ಶಾಂತಗಂಗಾಧರ್‌  ಉಪನ್ಯಾಸ ನೀಡಿ, ಧರ್ಮ ಕಾಪಾಡಿದ ಜನ ಹರಿಹರ ತಾಲ್ಲೂಕಿನಲ್ಲಿದ್ದು, ಸಮಾಜದ ಜನರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ.

ಒಲಿದು ಬಂದ ಸಿಎಂ ಪಟ್ಟವನ್ನು ತ್ಯಾಗ ಮಾಡಿದ ಏಕೈಕ ವ್ಯಕ್ತಿ ಹೆಚ್‌. ಸಿದ್ದವೀರಪ್ಪನ ವರಾಗಿದ್ದಾರೆ. ಅವರ ಹಾದಿಯಲ್ಲಿ ಇಟಗಿ ಮಹೇಶ್ವರಪ್ಪನವರು ಎಂದೂ ಅಧಿಕಾರಕ್ಕೆ ಆಸೆ ಪಡದೆ ಬೇರೆಯವರನ್ನು ಬೆಳೆಸಿದ್ದಾರೆ. ಅವರು ಸಮಾಜದ ಮಾರ್ಗದರ್ಶಕರು ಹಾಗೂ ಹಿತಚಿಂತಕರಾಗಿದ್ದರು ಎಂದರು.

ಮಾಜಿ ಸಚಿವರೂ ಆದ ಹಾಲಿ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಇಟಗಿ ಮಹೇಶ್ವರಪ್ಪನವರು ಆರಂಭದಲ್ಲಿ ರಾಜಕೀಯವಾಗಿ ನಮ್ಮನ್ನು ವಿರೋಧಿಸುತ್ತಿದ್ದರೂ ರೈತರ ಪರ ಹೋರಾಟದಲ್ಲಿ ಬೆಂಬಲವಾಗಿದ್ದರು.

ಕೊನೆಗೆ ರಾಜಕೀಯವಾಗಿ ನಮ್ಮ ಜೊತೆ ಸೇರಿ ಹರೀಶ್‌, ಸಿದ್ದೇಶ್ವರ ಸೇರಿದಂತೆ ಮತ್ತಿತರರನ್ನು ಬೆಳೆಸಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಅಧ್ಯಕ್ಷ ಎ. ಗೋವಿಂದರೆಡ್ಡಿ, ನಿವೃತ್ತ ಪ್ರಾಚಾರ್ಯ ಪ್ರೊ. ಬಾತಿ ಬಸವರಾಜ್‌, ಉಪನ್ಯಾಸಕಿ ಶ್ರೀಮತಿ ಸುಮತಿ ಜಯಪ್ಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಹರ ತಾ. ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪಗೌಡ್ರು ಮಾತನಾಡಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌ ಅವರು ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಇಟಗಿ ಮಹೇಶ್ವರಪ್ಪನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.

ಶ್ರೀ ಶಿವಾನಂದ ಗುರೂಜಿ, ಬೆಳ್ಳೂಡಿ ರಾಮಚಂದ್ರಪ್ಪ, ಕೆ. ಸಂಜೀವಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಮಂಜುನಾಥ್‌ ಕುರ್ಕಿ, ಎ.ಆರ್‌. ಉಜ್ಜನಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ನಿಖಿಲ್‌ ಕೊಂಡಜ್ಜಿ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್‌ ಪಟೇಲ್, ತಾ.ಪಂ. ಸದಸ್ಯ ಆದಾಪುರ ವೀರಭದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ.ಪಂ. ಮಾಜಿ ಸದಸ್ಯ ಸಿರಿಗೆರೆ ಕೊಟ್ರಪ್ಪ, ರೈಸ್‌ ಮಿಲ್‌ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ತಳಸದ ಬಸವರಾಜ್‌, ಡಾ. ಬಿ. ಚಂದ್ರಶೇಖರ್‌, ಯಲವಟ್ಟಿ ಆಂಜಿನಪ್ಪ, ಎನ್‌.ಜಿ. ಶಿವಾಜಿ ಪಾಟೀಲ್‌, ಇಟಗಿ ಮಹೇಶ್ವರಪ್ಪನವರ ಪುತ್ರರಾದ ಇ.ಎಂ. ಮರುಳಸಿದ್ದಪ್ಪ, ಇಂಜಿನಿಯರ್‌ ಇ.ಎಂ. ರೇವಣಸಿದ್ದಪ್ಪ, ತಾ. ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ಇಟಗಿ ಶಿವಣ್ಣ, ಖ್ಯಾತ ವೈದ್ಯ ಡಾ. ಇ.ಎಂ. ಸುರೇಂದ್ರ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಇ.ಎಂ. ಸುಜಿತ್‌ ಸ್ವಾಗತಿಸಿದರು. ಉಪನ್ಯಾಸಕ ಎಸ್‌.ಜಿ. ನಾಗರಾಜ್‌ ನಿರೂಪಿಸಿದರೆ, ಬಿ.ಜಿ ಧನಂಜಯ ವಂದಿಸಿದರು.

error: Content is protected !!