ಜಗಳೂರಿನಲ್ಲಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಸಲಹೆ
ಜಗಳೂರು, ಮಾ.18 – ಅಭಿವೃದ್ದಿಗೆ ಪೂರಕವಾಗಿ ಬಜೆಟ್ ಅನುದಾನ ಲೋಪವಾಗದೆ ಸದ್ಬಳಕೆಯಾಗಬೇಕು, ಪಕ್ಷಾತೀತವಾಗಿ ಅಭಿವೃದ್ಧಿಗೆ ಎಲ್ಲರೂ ಸಹಕರಿಸ ಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಸಲಹೆ ನೀಡಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 2021-22 ನೇ ಸಾಲಿನ ಬಜೆಟ್ ಮಂಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆ, ಮೂಲ ಸೌಕರ್ಯಕ್ಕೆ ಒತ್ತು ನೀಡಿ ನನ್ನ ಕಲ್ಪನೆಯಂತೆ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ, 2 ಕೋಟಿ ವೆಚ್ಚದಲ್ಲಿ ಆಡಿಟೋರಿಯಂ, ರಂಗಮಂದಿರ ನಿರ್ಮಿಸಿ ಸುಂದರವಾಗಿ ಪಟ್ಟಣವನ್ನು ಅಭಿವೃದ್ದಿ ಪಡಿಸುವುದು ನನ್ನ ಕನಸು. ಮತ ನೀಡಿದ ಜನತೆಯ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಪೈಪ್ ಲೈನ್ ದುರಸ್ತಿ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳಿಂದ ಶಾಂತಿ ಸಾಗರ ನೀರು ಸಮರ್ಪಕವಾಗಿ ಪಟ್ಟಣಕ್ಕೆ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಜಗಳೂರಿನ ಐತಿಹಾಸಿಕ ಕೆರೆಗೆ 57 ಕೆರೆ ನೀರು ತುಂಬಿಸುವ ಮತ್ತು ಭದ್ರಾ ಮೇಲ್ದಂಡೆ ಎರಡೂ ಯೋಜನೆಗಳಿಂದ ನೀರು ಭರ್ತಿ ಮಾಡಿ ಪಟ್ಟಣಕ್ಕೆ ಶುದ್ದ ನೀರಿನ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದಲ್ಲಿ ವಾಹನ ದಟ್ಟಣೆಯಾಗುತ್ತಿದ್ದು ಬೈಪಾಸ್ ರಸ್ತೆ ನಿರ್ಮಿಸಲು ಪ್ರಸ್ತಾವನೆ ತಯಾರಿಸಿ ಹಾಗೂ ಡ್ರೈನೇಜ್ ವ್ಯವಸ್ಥೆಗೆ ನಿಗಮದಿಂದ ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಎಸ್.ಎಫ್.ಸಿ ಅನುದಾನದ ಕೊರತೆಯಾಗಿದೆ. ಅಲ್ಲದೆ ಪಟ್ಟಣದಲ್ಲಿ ನಿವೇಶನಕ್ಕೆ ಜಮೀನು ಲಭ್ಯವಾಗುತ್ತಿಲ್ಲ. ಇದರಿಂದ ವಸತಿ ರಹಿತರಿಗೆ ಸೂರು ಕಲ್ಪಿಸಲು ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್ ಸೇರಿದಂತೆ ಪ.ಪಂ.ನ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.