ಅರಣ್ಯಾಧಿಕಾರಿಗಳ ವೃತ್ತಿ ಧರ್ಮಕ್ಕೆ ಪರಿಸರ ಪ್ರಿಯರ ಶ್ಲ್ಯಾಘನೆ
ಕೂಡ್ಲಿಗಿ, ಜೂ. 7 – ತಾಲ್ಲೂಕಿನ ಗುಡೇಕೋಟೆ ಕರಡಿಧಾಮ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳ ನೇತೃತ್ವ ದಲ್ಲಿ ನೀರು ಹರಿಯುವ ಸ್ಥಳಗಳಲ್ಲಿ ಗುಂಡಿಗಳನ್ನು ನಿರ್ಮಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದು, ವಿಶ್ವ ಪರಿಸರ ದಿನಾಚರಣೆಯ 3 ದಿನದ ಮುಂಚೆ ಉತ್ತಮ ಮಳೆಯಾಗಿದ್ದರಿಂದ ಈ ಗುಂಡಿಗಳು ತುಂಬಿಕೊಂಡು ಅರಣ್ಯ ಮತ್ತು ವನ್ಯಜೀವಿಗಳಿಗೆ ಆಸರೆಯಾಗಿವೆ.
ಗುಡೇಕೋಟೆ, ಅಪ್ಪೇನಹಳ್ಳಿ, ಸಿಡೇಗಲ್ಲು, ರಾಮದುರ್ಗ ಅರಣ್ಯಪ್ರದೇಶಗಳಲ್ಲಿ ಇಂತಹ ನೀರು ಸಂಗ್ರಹಿಸುವ ಟ್ರೆಂಚ್ಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದು, ಅರಣ್ಯದ ಗಿಡಮರಗಳಿಗೆ ಹಾಗೂ ವನ್ಯಜೀವಿಗಳಿಗೆ ಆ ಗುಂಡಿಗಳು ಆಸರೆಯಾಗುವುದಲ್ಲದೇ ಸ್ಥಳೀಯ ಕೂಲಿ ಕಾರ್ಮಿಕರಿಗೆ, ರೈತರಿಗೆ ಲಾಕ್ಡೌನ್ ಸಮಯದಲ್ಲಿ ಸಹಸ್ರಾರು ಮಾನವ ದಿನಗಳ ಕೂಲಿಯನ್ನು ಒದಗಿಸಿದಂತಾಗಿದೆ. ಮಳೆ ನೀರನ್ನು ಸಹ ಅಲ್ಲಲ್ಲೇ ಇಂಗಿಸಿದಂತಾಗುವುದಲ್ಲದೇ ಪ್ರಾಣಿ, ಪಕ್ಷಿಗಳಿಗೆ ಮಳೆಗಾಲದಲ್ಲಿ ಕುಡಿಯುವ ನೀರು ಎಲ್ಲಾ ಪ್ರದೇಶಗಳಲ್ಲಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.
ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಟ್ರೆಂಚ್ಗಳನ್ನು ನಿರ್ಮಿಸಿದ್ದು, ಗುಡೇಕೋಟೆ ಕರಡಿಧಾಮ ಪ್ರದೇಶ ವ್ಯಾಪ್ತಿಗೆ ಬರುವುದರಿಂದ ಕರಡಿಗಳು ಸೇರಿದಂತೆ ಇತರೆ ಕಾಡುಪ್ರಾಣಿಗಳಿಗೆ, ಗಿಡಮರಗಳಿಗೆ ಆಸರೆಯಾಗಿವೆ. ಭೂಮಿಯ ಮಣ್ಣಿನ ಸವಕಳಿಯನ್ನು ತಪ್ಪಿಸಿದಂತಾಗಿದೆ.
– ಎ. ರೇಣುಕಾ, ಅರಣ್ಯಾಧಿಕಾರಿ, ಗುಡೇಕೋಟೆ ವಲಯ
ಸಾವಿರಕ್ಕೂ ಹೆಚ್ಚು ಗುಂಡಿಗಳು: ಗುಡೇಕೋಟೆ ಕರಡಿಧಾಮ ಪ್ರದೇಶದಲ್ಲಿ 1,000 ಕ್ಕೂ ಹೆಚ್ಚು ಮಳೆ ನೀರು ಸಂಗ್ರಹಿಸುವ ಗುಂಡಿಗಳನ್ನು ನಿರ್ಮಿಸಲಾಗಿದ್ದು, ನೀರಿನ ಹರಿವಿನ ಪ್ರಮಾಣ ನೋಡಿ ಗುಂಡಿಗಳ ಅಳತೆಯನ್ನು ಮಾಡಲಾಗಿದೆ.
ನೀರು ಹೆಚ್ಚು ಹರಿಯುವ ಪ್ರದೇಶದಲ್ಲಿ 5 ಮೀಟರ್ ಉದ್ದ, 2 ರಿಂದ 3 ಮೀಟರ್ ಅಗಲ, 1 ಮೀಟರ್ ಆಳದ ಗುಂಡಿಗಳನ್ನು ತೆಗೆಯಲಾಗಿದೆ.
ನೀರು ಕಡಿಮೆ ಹರಿಯುವ ಪ್ರದೇಶದಲ್ಲಿ 3 ಮೀ. ಉದ್ದ, 1 ಮೀಟರ್ ಅಗಲ, 1 ಮೀಟರ್ ಆಳದ ಗುಂಡಿಗಳನ್ನು ತೆಗೆಸಲಾಗಿದೆ. ಈ ಎಲ್ಲಾ ಟ್ರೆಂಚ್ಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ತೆಗೆದಿದ್ದು , 23,605 ಮಾನವ ದಿನಗಳನ್ನು ಬಳಸಿ ಕೊಂಡು ಖಾತ್ರಿ ಯೋಜನೆಯನ್ನು ಅರಣ್ಯಾಧಿಕಾರಿಗಳು ಸದುಪಯೋಗಪಡಿಸಿ ಕೊಂಡಿರುವುದು ಶ್ಲಾಘನೀಯ.