ವೀರಶೈವ ಜಂಗಮರು ‘ಬೇಡ ಜಂಗಮ’ ಎಂದು ದಾಖಲಿಸುತ್ತಿರುವುದರ ವಿರುದ್ಧ ಹೋರಾಟ

ಕೂಡ್ಲಿಗಿ, ಆ.3-ರಾಜ್ಯದಲ್ಲಿ ವೀರಶೈವ  ಲಿಂಗಾಯತ ಜಂಗಮರು ಬೇಡ ಜಂಗಮ ಎಂಬ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ತಮ್ಮ ಜಾತಿಯನ್ನು ದಾಖಲು ಮಾಡುತ್ತಿರುವ ವಿರುದ್ಧ ಮುಂದಿನ ದಿನಗಳಲ್ಲಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಹೋರಾಟ ಮಾಡಲಿದ್ದು, ಹೋರಾಟ ಗಾರರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ  ಬಳ್ಳಾರಿ ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಪಿ. ಸಂತೋಷ್ ಕುಮಾರ್ ಕರೆ ನೀಡಿದ್ದಾರೆ.

ಪಟ್ಟಣದ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಇಂದು ಅವರು ಮಾತನಾಡಿದರು. ಶಾಲೆಗಳಲ್ಲಿ 1999 ರಿಂದಲೂ ದಾಖಲಾತಿಗಳಲ್ಲಿ ಬೇಡ ಜಂಗಮ ಎಂದು ದಾಖಲಿಸುತ್ತಿದ್ದಾರೆ. ಇದು ಮುಂದಿನ ಪೀಳಿಗೆಗೆ ದೊಡ್ಡ ದುರಂತ ಘಟನೆ ಯಾಗಿ ಮಾರ್ಪಡುತ್ತದೆ. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಪ್ರಭುದೇವ ಮಲ್ಲಿಕಾರ್ಜುನ್ ವರ್ಸಸ್‌ ರಾಮಾನುಜನ್ ಪ್ರಕರಣದಲ್ಲಿ ಶಾಲೆಯ ದಾಖಲೆಯು 30 ವರ್ಷದ ದಾಖಲೆಯಾಗಿದ್ದರೆ ಅದು ಮೌಲ್ಯವೆಂದು ಪರಿಗಣಿಸಲಾಗುತ್ತದೆ. ಇದು ಹೀಗೆ ಮುಂದುವರೆದರೆ ವೀರಶೈವ ಜಂಗಮರೇ ಪರಿಶಿಷ್ಟ ಜಾತಿಗೆ ಸೇರಿದ ನಿಜವಾದ ಬೇಡ ಜಂಗಮರೆಂಬಂತಾಗುತ್ತದೆ.

ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಶಾಲೆಯೊಂದರಲ್ಲಿ ಬೇಡ ಜಂಗಮ ಎಂಬ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿ ಕೇಳಿದಾಗ ವೀರಶೈವ ಜಂಗಮ ಜಾತಿಗೆ ಸೇರಿದ 34 ವಿದ್ಯಾರ್ಥಿಗಳ ಮಾಹಿತಿ ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ಈ ಎಲ್ಲ ವಿದ್ಯಾರ್ಥಿಗಳು ವೀರಶೈವ ಜಂಗಮ ಜಾತಿಗೆ ಸೇರಿದವರಾಗಿರುತ್ತಾರೆ ಎಂದು ತಿಳಿದುಬಂದಿದೆ.ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅರ್ಜಿ ಯನ್ನು ಸಹ ಪೊಲೀಸ್ ಇಲಾಖೆಗೆ ಸಲ್ಲಿಸಲಾಗಿದೆ. ಶಾಲೆಯಲ್ಲಿ ತಹಶೀಲ್ದಾರರು ನೀಡುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ದಾಖಲಾತಿ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್.ದುರ್ಗೇಶ್, ಮಾದಿಗ ದಂಡೋರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಲುಮನೆ ರಾಘವೇಂದ್ರ, ಬಿ. ಮಹೇಶ್, ಸುಂಕದಕಲ್ ಸಿದ್ದಪ್ಪ, ಹೆಚ್. ಬಸಪ್ಪ, ಛಲವಾದಿ ಮಹಾಸಭಾದ ಅಧ್ಯಕ್ಷ ಕೊಟ್ರೇಶ್, ಸಿ.ಬಸವರಾಜ್, ಕೃಷ್ಣಪ್ಪ, ಹೆಚ್.ಬಿ. ಹಳ್ಳಿ ಪ್ರಕಾಶ್ ಇನ್ನಿತರ ದಲಿತ ಮುಖಂಡರು ಭಾಗವಹಿಸಿದ್ದರು.

error: Content is protected !!