ಧೂಳೆಹೊಳೆ ಗ್ರಾಮದ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಎಸ್.ಶ್ರೀರಾಮುಲು
ಮಲೇಬೆನ್ನೂರು, ಆ.3- ದೇಶದ 2 ರಿಂದ 17 ವರ್ಷದೊಳಗಿನ ಶೇ. 25 ಶಾಲಾ ಮಕ್ಕಳು ದೃಷ್ಟಿದೋಷ ಹೊಂದಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಂಧತ್ವ ವಿಭಾಗದ ವೈದ್ಯಾಧಿಕಾರಿ ಡಾ. ಎಸ್.ಶ್ರೀರಾಮುಲು ತಿಳಿಸಿದ್ದಾರೆ.
ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದೃಷ್ಟಿದೋಷ ಇರುವ ಮಕ್ಕಳಿಗೆ ಕನ್ನಡಕ ವಿತರಣೆ ಮಾಡಿ ಮಾತನಾಡಿದ ಅವರು, ಜರ್ಮಾ ವೆಲ್‍ನೆಸ್ ಎಂಬ ಸಂಸ್ಥೆ ದೇಶದ ವಿವಿಧೆಡೆ ನಡೆಸಿದ ಸರ್ವೆಯಿಂದ ಶಾಲಾ ಮಕ್ಕಳ ದೃಷ್ಟಿದೋಷದ ಅಂಶ ಬೆಳಕಿಗೆ ಬಂದಿದೆ ಎಂದರು.
ಪ್ರೌಢಶಾಲಾ ಹಂತದಲ್ಲಿನ ಗಣನೀಯ ಸಂಖ್ಯೆಯ ಮಕ್ಕಳಲ್ಲಿ ಸಮೀಪ ಅಥವಾ ದೂರದೃಷ್ಟಿ ದೋಷ ಇದೆ. ಇಬ್ಬರಲ್ಲಿ ಒಬ್ಬ ವಿದ್ಯಾರ್ಥಿ ಕನ್ನಡಕ ಧರಿಸುವ ಅಗತ್ಯವಿದೆ. ನಂತರ ಕನ್ನಡಕ ಧರಿಸುವ ಪ್ರತಿ ಮೂವರಲ್ಲಿ ಒಬ್ಬರು ಅಗತ್ಯವಿರುವ ಸೂಕ್ತ ಕನ್ನಡಕ ಧರಿಸಿರುವುದಿಲ್ಲ ಎಂದರು.
ಮುಖ್ಯ ಶಿಕ್ಷಕ ಎ.ಬಸವರಾಜ್ ಮಾತನಾಡಿ, ಮಕ್ಕಳು ಚಿಕ್ಕವರಿದ್ದಾಗ ಅವರ ಆಹಾರ ಸೇವನೆ ಪೋಷಕರ ಉಸ್ತುವಾರಿಯಲ್ಲಿರುತ್ತದೆ. ಆದರೆ ಮಕ್ಕಳು ಬೆಳೆದಂತೆ ಆಹಾರ ಸೇವನೆಯಲ್ಲಿ ಬದಲಾವಣೆಯಾಗುತ್ತದೆ. ಅವರು ಜಂಕ್ ಫುಡ್ ಸೇವನೆ ಮಾಡುತ್ತಾರೆ ಹಾಗೂ ದೈಹಿಕ ಚಟುವಟಿಕೆ ಕ್ಷೀಣಿಸಿಕೊಂಡು ದೈಹಿಕ ಶಕ್ತಿ ಕಳೆದುಕೊಳ್ಳುತ್ತಾರೆ.
ಎರಡನೆಯದಾಗಿ ಮೊಬೈಲ್, ಕಂಪ್ಯೂಟರ್, ಟಿ.ವಿ. ಇತರೆ ಎಲೆಕ್ಟ್ರಾನಿಕ್ (ಡಿಜಿಟಲ್ ಯುಸೇಜ್) ವಸ್ತುಗಳ ಅಧಿಕ ವೀಕ್ಷಣೆ ಮಾಡುತ್ತಾರೆ. ಇದರಿಂದಾಗಿ ಅವರಲ್ಲಿ ದೃಷ್ಟಿ ದೋಷ ಸೃಷ್ಟಿಯಾಗುತ್ತದೆ ಎಂದರು.
ನೇತ್ರ ಪರಿವೀಕ್ಷಕ ಮೊಹ್ಮದ್ ಹುಸೇನ್ ಮಾತನಾಡಿದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹೆಗಡೆ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರಯ್ಯ, ಶಿಕ್ಷಕರಾದ ಕೆ. ಮಂಗಳ, ಲೈಕಾ ಬಾನು, ಉಮೇಶ್, ಹೇಮಾ ಟಿ.ವಿ., ರಶ್ಮಿ ಡಿ.ಜಿ. ಶಾಲಾ ಮಕ್ಕಳಿದ್ದರು.