ಮಲೇಬೆನ್ನೂರು, ನ.11- ಕೇವಲ ಸಾಲಕ್ಕಾಗಿ ಮಾಡಿರುವ ಸ್ವಸಹಾಯ ಸಂಘಗಳು ಇವಲ್ಲ. ಜನರ ಬದುಕಿನಲ್ಲಿ ಹೊಸ ಬದಲಾವಣೆ ತರುವುದಕ್ಕಾಗಿ ಸಂಘಗಳನ್ನು ರಚಿಸಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಹೇಳಿದರು.
ಜಿಗಳಿ ಗ್ರಾಮದ ಶ್ರೀ ಮಹೇಶ್ವರ ಸಮುದಾಯ ಭವನದಲ್ಲಿ ನಂದಿತಾವರೆ ವಲಯ ವ್ಯಾಪ್ತಿಯ ಒಕ್ಕೂಟದ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
`ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಖಾವಂದರು ಮಾಡದ ಕಾರ್ಯವಿಲ್ಲ. ಎಲ್ಲಾ ಜನರ ಹಿತ ಬಯಸಿ ಸಂಘಗಳನ್ನು ರಚಿಸಿದ್ದಾರೆ. ರೈತರಿಗಾಗಿ ಪ್ರಗತಿ ಬಂಧು, ಮಹಿಳೆಯರಿಗಾಗಿ ಸ್ವ-ಸಹಾಯ ಸಂಘ, 60 ವರ್ಷ ದಾಟಿದ ಸದಸ್ಯರಿಗಾಗಿ ವಾತ್ಸಲ್ಯ ಸಂಘಗಳನ್ನು ರಚಿಸಿ ದ್ದಾರೆ. ವೃದ್ಧರಿಗೆ ವೃದ್ಧಾಪ್ಯ ವೇತನದ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಜನಮಂಗಲ ಯೋಜನೆಯಡಿ ವೈದ್ಯಕೀಯ ವೆಚ್ಚಕ್ಕಾಗಿ ಆರ್ಥಿಕ ನೆರವನ್ನು ಡಾ. ವೀರೇಂದ್ರ ಹೆಗ್ಗಡೆ ನೀಡುತ್ತಿದ್ದಾರೆ ಎಂದು ವಸಂತ್ ದೇವಾಡಿಗ ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿ, ಜನರಿಗೆ ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಈ ಯೋಜನೆ ಶಿಸ್ತು, ಸಂಸ್ಕಾರ ವನ್ನು ಕಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
`ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್ ಮಾತನಾಡಿ, ಈ ಯೋಜನೆ ಸಾಮಾಜಿಕ ಜವಾಬ್ದಾರಿ ಹೊತ್ತಿದ್ದು, ದೇಶಕ್ಕೇ ಮಾದರಿಯಾಗಿದೆ ಎಂದರು. ಮಲೇಬೆನ್ನೂರು ಮೇಲ್ವಿಚಾರಕ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯೋಜನಾ ಕಚೇರಿಯ ಲೆಕ್ಕ ಪರಿಶೋಧಕ ಚಿದಂಬರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರಕ್ಷಿತಾ, ಜಿಗಳಿ ಒಕ್ಕೂಟದ ಅಧ್ಯಕ್ಷ ಎಂ.ಬಿ. ರುದ್ರಗೌಡ, ನಂದಿತಾವರೆ ವಲಯ ಮೇಲ್ವಿಚಾ ರಕರಾದ ಪದ್ಮಾವತಿ, ಜಿಗಳಿ ಸೇವಾ ಪ್ರತಿನಿಧಿ ಶೋಭಾ ಮತ್ತು ಇತರರು ಭಾಗವಹಿಸಿದ್ದರು.