ಶಿಕ್ಷಕ ಹೂಗಾರ್ ನಿವೃತ್ತಿ : ಆತ್ಮೀಯ ಬೀಳ್ಕೊಡುಗೆ

ಮಲೇಬೆನ್ನೂರು, ಆ.2- ಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್‌.ಎಚ್‌. ಹೂಗಾರ್‌ ಅವರು ವಯೋ ನಿವೃತ್ತಿ ಹೊಂದಿದ್ದು, ಶಾಲೆಯಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಹೂಗಾರ್ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್‌ ಪ್ರಸನ್ನಕುಮಾರ್‌, ಹೂಗಾರ್‌ ಅಷ್ಟೇ ಅಲ್ಲದೇ, ಅವರ ಕುಟುಂಬದವರೂ ಕೂಡಾ ಶಿಕ್ಷಣ ಇಲಾಖೆಗೆ ಪರಿಚಿತರಾಗಿದ್ದು, ಹೂಗಾರ್‌ ಮತ್ತು ಅವರ ಕುಟುಂಬ ಶಿಕ್ಷಣ ಇಲಾಖೆಯ ಬಹುದೊಡ್ಡ ಆಸ್ತಿ ಎಂದು ಶ್ಲಾಘಿಸಿದರು. 

ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಮಾತನಾಡಿ, ಹೂಗಾರ್‌ ಅವರ ಪಾಠ ಕೇಳಲು ವಿದ್ಯಾರ್ಥಿಗಳು ಕಾಯುತ್ತಿದ್ದರೆಂದರೆ ಅವರ ವ್ಯಕ್ತಿತ್ವ ಎಂತಹದ್ದು ಎಂದು ಗೊತ್ತಾಗುತ್ತದೆ ಎಂದರು.

ಹರಿಹರ ಬಿಇಓ ಸಿದ್ದಪ್ಪ ಮಾತನಾಡಿ, ಶಿಕ್ಷಕ ವೃತ್ತಿಯ ಜೊತೆಗೆ ಹರಿಹರ ತಾಲ್ಲೂಕು ಮತ್ತು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ ದಾನಿಗಳ ನೆರವಿನಿಂದ ದಾವಣಗೆರೆ ಜಿಲ್ಲೆಯ ಪ್ರಥಮ ಹಾಗೂ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಮಾಡಿದ ಕೀರ್ತಿ ಹೂಗಾರ್‌ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಎಸ್‌.ಎಚ್‌. ಹೂಗಾರ್‌ ಅವರು, ದಿನಾಂಕ 5.9.1985 ರಂದು ಶಿಕ್ಷಕರ ದಿನಾಚರಣೆಯ ದಿನವೇ ಶಿಕ್ಷಕ ವೃತ್ತಿಗೆ ಸೇರಿಕೊಂಡೆ, ಪ್ರೌಢಶಾಲೆಯ ಸಹ ಶಿಕ್ಷಕನಾಗಿ, ಶಾಲಾ ತನಿಖಾಧಿಕಾರಿ, ಪ್ರೌಢಶಾಲಾ ಮುಖ್ಯ ಶಿಕ್ಷಕನಾಗಿ 38 ವರ್ಷಗಳ ಸೇವೆ ಜೀವನದಲ್ಲಿ ತೃಪ್ತಿ ತಂದಿದೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡ ವೀರಾಚಾರ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ ಮಾಜಿ ಅಧ್ಯಕ್ಷ ಎಸ್‌.ಜಿ. ಪರಮೇಶ್ವರಪ್ಪ ಮಾತನಾಡಿದರು. 

ಗ್ರಾಮದ ನಿವೃತ್ತ ಶಿಕ್ಷಕ ಹನುಮಂತಪ್ಪ, ಶಿಕ್ಷಕ ಸಂಜಯ್‌, ಶಿಕ್ಷಕಿ ಮರಳಸಿದ್ದಮ್ಮ ಮಾತನಾಡಿದರು.

ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್‌ ಪಟೇಲ್‌, ತಾ. ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೊಕ್ಕನೂರು ಜಯಣ್ಣ, ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್‌. ಚಂದ್ರಪ್ಪ, ಹರಿಹರ ಬಿಆರ್‌ಸಿ ಕೆ.ಆರ್‌ ವಿಶ್ವನಾಥ್‌, ಹೊನ್ನಾಳಿ ಬಿಆರ್‌ಸಿ ಉಮಾಶಂಕರ್‌, ಮಧುಗಿರಿ ಡಯಟ್‌ ಉಪನ್ಯಾಸಕ ಬಿ.ಕೆ ದಿನೇಶ್‌, ಶಿಕ್ಷಕ ಮಲ್ಲಿಕಾರ್ಜುನ್‌ ಅಂಗಡಿ, ಹೂಗಾರ್‌ ಅವರ ಸಹೋದರ ಪಿ. ರುದ್ರಮುನಿ, ಹೂಗಾರ್‌ ಪತ್ನಿ ಶ್ರೀಮತಿ ಭಾರತಿ, ಕುಂಬಳೂರು ವಾಸು, ಪತ್ರಕರ್ತರಾದ ಸದಾನಂದ್‌, ಜಿಗಳಿ ಪ್ರಕಾಶ್‌ ಮತ್ತಿತರರು ಭಾಗವಹಿಸಿದ್ದರು.

ಸಂಗೀತ ಶಿಕ್ಷಕ ದ್ಯಾಮನಗೌಡರ ಮಹೇಶ್‌ ಚಂದ್ರಗೌಡ ಪ್ರಾರ್ಥಿಸಿದರು. ಗಣಿತ ಶಿಕ್ಷಕ ಆರ್‌. ವೆಂಕಟೇಶ್‌ ಸ್ವಾಗತಿಸಿದರು. ಹಿಂದಿ ಶಿಕ್ಷಕ ಪಿ. ರಮೇಶ್‌ ನಿರೂಪಿಸಿದರೆ, ಇಂಗ್ಲಿಷ್‌ ಶಿಕ್ಷಕ ಡಿ. ಮಾಲತೇಶ್‌ ವಂದಿಸಿದರು.

error: Content is protected !!