ದಾವಣಗೆರೆ, ಮಾ.17- ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ವಿದ್ಯಾರ್ಥಿ ಒಕ್ಕೂಟ ತಾಲ್ಲೂಕು ಶಾಖೆ ವತಿಯಿಂದ ಬುಧವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನೂತನ ಆದಾಯದ ಕಾನೂನು ನಿಲ್ಲಿಸಿ, ಈ ಹಿಂದೆ ಇದ್ದ ಕಾನೂನನ್ನು ಮುಂದುವರೆಸಬೇಕು.
ಈ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಸಂಘಟನೆಯ ಮುಖಂಡರು ಒತ್ತಾಯಿಸಿದರು.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ ಯುವಕರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿದರು.
ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯಗಳನ್ನು ಕಲಿಸಬೇಕು, ಶಾಲಾ-ಕಾಲೇಜುಗಳಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮೇಲಿನ ಅಸ್ಪೃಶ್ಯತೆ ಹಾಗೂ ದೌರ್ಜನ್ಯ ತಡೆಯಬೇಕು, ವಿವಿಗಳಲ್ಲಿ ದಾಖಲಾತಿ ಶುಲ್ಕ ಕಡಿಮೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕುಂದುವಾಡ ಮಂಜುನಾಥ್, ಪರಮೇಶ್ ಪುರದಾಳ್, ದುರ್ಗಾಪ್ರಸಾದ್, ವಿಜಯಮ್ಮ, ಜಿಗಳಿ ಹಾಲೇಶ್, ಮಾಂತೇಶ್ ಬೇತೂರು, ಮಂಜುನಾಥ ನೀರ್ಥಡಿ, ಮಹಾಂತೇಶ್ ಹಾಲುವರ್ತಿ ಮತ್ತಿತರರು ಪಾಲ್ಗೊಂಡಿದ್ದರು.