ಜಗಳೂರು ಪ.ಪಂ : 16.33 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಜಗಳೂರು, ಮಾ.17- ಪಟ್ಟಣ ಪಂಚಾಯ್ತಿಯ 2021-22 ನೇ ಸಾಲಿನ 64.25 ಕೋಟಿ ರೂ.ಗಳ ಆದಾಯ ನಿರೀಕ್ಷೆ ಮತ್ತು 64.09 ಕೋಟಿ ರೂ. ಗಳ ವೆಚ್ಚಗಳನ್ನು  ಅಂದಾಜುಪಡಿಸಿ, 16.33 ಲಕ್ಷ ರೂ.ಗಳ ಉಳಿತಾಯ ಬಜೆಟ್ಟನ್ನು ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಮಂಡಿಸಿದರು.

ಪಟ್ಟಣದ ಪ.ಪಂ. ಸಭಾಂಗಣದಲ್ಲಿ ಈ ಸಾಲಿನ ಬಜೆಟ್ ಮಂಡನಾ ಸಭೆಯಲ್ಲಿ ಬಜೆಟ್ ಮಂಡಿಸಿ ಅವರು ಮಾತನಾಡಿದರು.

ಪಟ್ಟಣದ ಅಭಿವೃದ್ಧಿಗಾಗಿ ಈ ಸಾಲಿನ 14ನೇ ಹಣಕಾಸು ಬೇಸಿಕ್ ಗ್ರಾಂಟ್ ಮತ್ತು  ಪ್ರೋತ್ಸಾಹ ಧನ ಅನುದಾನದಲ್ಲಿ 145.34 ಲಕ್ಷ ರೂ. ಪ.ಜಾತಿ ಮತ್ತು ಪ.ಪಂಗಡದವರ ಅಭಿವೃದ್ಧಿಗಾಗಿ ಶೇ. 24.10 ಅಡಿ ಸಾಮಾನ್ಯನಿಧಿಯಿಂದ 13.25 ಲಕ್ಷ ರೂ. ಹಾಗೂ ಎಸ್‌ಎಫ್‌ಸಿ ಅನುದಾನದಡಿ 26.51 ಲಕ್ಷ ರೂ ಸೇರಿ ಒಟ್ಟು 39.76 ಲಕ್ಷ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಶೇ.7.25 ಅಡಿ 4.08 ಲಕ್ಷ ರೂ. ಹಾಗೂ ಎಸ್‌ಎಫ್‌ಸಿ ಅನುದಾನದಡಿ 7.25 ಲಕ್ಷ ರೂ. ಸೇರಿ ಒಟ್ಟು 11.33 ಲಕ್ಷ ವಿಕಲಚೇತನರ ಕಲ್ಯಾಣಕ್ಕಾಗಿ ಶೇ. 5 ರಡಿ 7.81 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲು ನಿರೀಕ್ಷಿಸಲಾಗಿದೆ.

ಕ್ರೀಡಾ ಉತ್ತೇಜನಕ್ಕಾಗಿ 0.56 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಎಸ್. ಎಫ್.ಸಿ. ಮುಕ್ತನಿಧಿಯ ಈ ಸಾಲಿನ ಅನುದಾನದಲ್ಲಿ 1 ಕೋಟಿ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಜೆಟ್‌ನಲ್ಲಿ ಪಟ್ಟಣದ 18 ವಾರ್ಡ್‌ಗಳಲ್ಲಿ 24×7 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಬೀದಿ ದೀಪ ನಿರ್ವಹಣೆ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಂಬಂಧಿಸಿದ ಕಾಮಗಾರಿ ಮತ್ತು ಕಾರ್ಯಕ್ರಮಗಳಿಗೆ ಹಾಗೂ ಬಯಲು ಶೌಚಮುಕ್ತ ಪಟ್ಟಣವನ್ನಾಗಿಸಲು, ಚರಂಡಿ ಮತ್ತು ರಸ್ತೆ ಅಭಿವೃದ್ಧಿ, ಎಲ್ಲಾ ವಾರ್ಡ್‌ಗಳಲ್ಲಿ ಬೀದಿ ದೀಪ ವ್ಯವಸ್ಥೆ ಶೇ.100 ಒದಗಿಸಲು ಮತ್ತು ರಾಜಕಾಲುವೆ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸರ್ವರೂ ಪಟ್ಟಣ ಪಂಚಾಯ್ತಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮುಖ್ಯಾಧಿಕಾರಿ ರಾಜು ಡಿ.ಬಣಕಾರ್, ಪಂ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಪ.ಪಂ. ಉಪಾಧ್ಯಕ್ಷೆ ಲಲಿತ ಶಿವಣ್ಣ, ಸದಸ್ಯರಾದ ಪಾಪಲಿಂಗಪ್ಪ, ರೇವಣ್ಣ, ರಮೇಶ್, ಲುಕ್ಮಾನ್ ಖಾನ್, ಶಕೀಲ್ ಅಹಮ್ಮದ್, ನವೀನ್ ಕುಮಾರ್, ದೇವರಾಜ್, ಮಂಜಣ್ಣ, ಲೋಕಮ್ಮ, ನಿರ್ಮಲ, ವಿಶಾಲಾಕ್ಷಿ, ರವಿಕುಮಾರ್, ನಾಮನಿರ್ದೇಶಿತ ಸದಸ್ಯ ರುದ್ರಮುನಿ, ಗಿರೀಶ್, ಕಂದಾಯ ನಿರೀಕ್ಷಕ ಸಂತೋಷ್, ಅಮ್ರೀನ್, ಕಿಫಾಯತ್  ಭಾಗವಹಿಸಿದ್ದರು.

error: Content is protected !!