ಮಲೇಬೆನ್ನೂರು, ಮೇ 30- ಕೊರೊನಾ ಮಹಾಮಾರಿ 2ನೇ ಅಲೆಯಲ್ಲಿ ಇದುವರೆಗೂ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗದೆ ಕೊರೊನಾ ಮುಕ್ತವಾಗಿರುವ ಹರಿಹರ ತಾಲ್ಲೂಕಿನ 6 ಗ್ರಾಮಗಳನ್ನು ಭಾನುವಾರ ಸೀಲ್‌ಡೌನ್ ಮಾಡಲಾಗಿದೆ.
ಜಿಗಳಿ ಗ್ರಾ.ಪಂ ವ್ಯಾಪ್ತಿಯ ವಡೆಯರ ಬಸಾಪುರ ಗ್ರಾಮ ಕೊರೊನಾ ಮುಕ್ತವಾಗಿದ್ದು, ಹರಿಹರ ತಾ.ಪಂ ಇಓ ಗಂಗಾಧರಪ್ಪ ಅವರ ಸೂಚನೆ ಮೇರೆಗೆ ಭಾನುವಾರ ಬೆಳಿಗ್ಗೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕರಿಯಮ್ಮ, ಉಪಾಧ್ಯಕ್ಷ ಆನಂದಗೌಡ, ಗ್ರಾಮದ ಸದಸ್ಯ ಹನುಮಂತಪ್ಪ, ಪಿಡಿಓ ದಾಸರ ರವಿ, ಪೊಲೀಸ್ ಪೇದೆ ಮುರುಗೇಶ್ ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಗ್ರಾಮಕ್ಕೆ ಭೇಟಿ ನೀಡಿದ್ದರು. ನಿಮ್ಮ ಗ್ರಾಮ ಕೊರೊನಾ ಮುಕ್ತವಾಗಿರುವುದರಿಂದ ಹೊರಗಡೆಯಿಂದ ಯಾವ ವ್ಯಕ್ತಿಗಳು ಗ್ರಾಮ ಪ್ರವೇಶಿಸದಂತೆ ನೋಡಿಕೊಳ್ಳಿ ಮತ್ತು ನೀವು ವಿನಾಕಾರಣ ಗ್ರಾಮದಿಂದ ಹೊರಗಡೆ ಹೋಗಬೇಡಿ. ಒಂದು ವೇಳೆ ಅನಿವಾರ್ಯವಾಗಿದ್ದರೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಟಾಂ ಟಾಂ ಮೂಲಕ ಪ್ರಚಾರ ಮಾಡಲಾಯಿತು.
ಗ್ರಾಮ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನೂ ಬಂದ್ ಮಾಡಿ, ಸಂಪೂರ್ಣವಾಗಿ ಲಾಕ್ ಮಾಡಿದ್ದೇವೆ. ಕೃಷಿ ಕೆಲಸಗಳಿಗೆ ಅಡ್ಡಿಪಡಿಸಿಲ್ಲ ಎಂದು ಪಿಡಿಓ ದಾಸರ ರವಿ ಸ್ಪಷ್ಟಪಡಿಸಿದರು.
ಇದೇ ರೀತಿ ಕೊರೊನಾ ಮುಕ್ತವಾಗಿರುವ ಕೊಕ್ಕನೂರು ಗ್ರಾ.ಪಂ ವ್ಯಾಪ್ತಿಯ ಹಳ್ಳಿಹಾಳ್ ಕ್ಯಾಂಪ್, ಬೆಳ್ಳೂಡಿ ಗ್ರಾ.ಪಂ ವ್ಯಾಪ್ತಿಯ ಬ್ಯಾಲದಹಳ್ಳಿ, ಹನಗವಾಡಿ ಗ್ರಾ.ಪಂ ವ್ಯಾಪ್ತಿಯ ಕರಲಹಳ್ಳಿ ಗ್ರಾಮಗಳನ್ನೂ ಇಲ್ಲಿನ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಅವರ ನೇತೃತ್ವದಲ್ಲಿ ಸೀಲ್‌ಡೌನ್ ಮಾಡಲಾಗಿದೆ ಎಂದು ಹೇಳಲಾಗಿದೆ.