ನಿವೇಶನ ಹಂಚಿಕೆ ಜೊತೆ ಮನೆ ನಿರ್ಮಿಸಿಕೊಡಲು ಆಗ್ರಹ
ದಾವಣಗೆರೆ, ಮಾ.17- ಜಿಲ್ಲೆಯಲ್ಲಿರುವ ವಸತಿ ರಹಿತ ಗೂಡ್ಸ್ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ನಿವೇಶನ ಹಂಚಿಕೆ ಮಾಡುವ ಜೊತೆಯಲ್ಲಿ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ನಗರದಲ್ಲಿಂದು ಜಿಲ್ಲಾ 3 ಚಕ್ರ ಮತ್ತು 4 ಚಕ್ರ ಗೂಡ್ಸ್ ವಾಹನಗಳ ಮಾಲೀಕರ ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರ ಪಾಲಿಕೆಗೆ ತೆರಳಿದ ಪ್ರತಿಭಟನಾಕಾರರು, ಮೇಯರ್ ಎಸ್.ಟಿ. ವೀರೇಶ್ ಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ನೀಲಾನಹಳ್ಳಿ ಜಮೀನಿನ ಸರ್ವೆ ನಂ. 20 ಹಾಗೂ 23/4 ರಲ್ಲಿ ಎಷ್ಟು ಫಲಾನುಭವಿಗಳಿಗೆ ಜಿಲ್ಲಾಡಳಿತವಾಗಲೀ, ಪಾಲಿಕೆಯಾಗಲೀ ನಿವೇಶನ ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಬೇಕೆಂದು ಹಲವಾರು ಬಾರಿ ಪ್ರತಿಭಟನೆ ನಡೆಸಲಾಗಿದ್ದರೂ ಸಹ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಜಮೀನು ಖರೀದಿಗೆ ಸಂಬಂಧಪಟ್ಟಂತೆ ಈಗಾಗಲೇ ಕಳೆದ ಜನವರಿ 6ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ಜಮೀನಿನ ಮಾಲೀಕ 55 ಲಕ್ಷಕ್ಕಿಂತ ಕಡಿಮೆಗೆ ತನ್ನ ಜಮೀನು ನೀಡುವುದಿಲ್ಲ ಎಂದು ಹೇಳಿದಾಗ ಜಿಲ್ಲಾಧಿಕಾರಿಗಳು 37.50 ಲಕ್ಷಕ್ಕಿಂತ ಹೆಚ್ಚು ಹಣವನ್ನು ಜಿಲ್ಲಾಡಳಿತದಿಂದ ಈ ಜಮೀನಿನ ಮಾಲೀಕನಿಗೆ ನೀಡಲು ಆಗುವುದಿಲ್ಲ ಎಂದು ತಿಳಿಸಿದ್ದರು. ಈ ಸಮಯದಲ್ಲಿ ಸಂಘವು ಉಳಿದ ಹಣವನ್ನು ನೀಡುವುದಾಗಿ ತಿಳಿಸಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅವರೊಂದಿಗೂ ಈ ಬಗ್ಗೆ ಚರ್ಚೆ ನಡೆದಿತ್ತು. ಅಂದು ಕೂಡ ಜಮೀನಿನ ಮಾಲೀಕ ಸರ್ಕಾರದ ಬೆಲೆಗೆ ನೀಡುವುದಿಲ್ಲ ಎಂದು ನಿರಾಕರಿಸಿದ್ದರು. ಇದನ್ನು ಆಲೋಚಿಸಿ ಸಂಘದ ವತಿಯಿಂದ ಸಂಘದ ಸದಸ್ಯರುಗಳಾಗಲೀ ಸಂಘದ ಬೆನ್ನೆಲುಬಾಗಿ ನಿಂತಿರುವ ಸಾರ್ವಜನಿಕರೂ ಸಹ ಉಳಿದ ಹಣವನ್ನು ನೀಡುತ್ತೇವೆಂದು ತಿಳಿಸಿದ್ದೆವು. ಆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಉಳಿದ ಹಣ ಆ ಸಮಯದಲ್ಲಿ ನೀಡಿದರೆ ಅಪ್ರೂವಲ್‍ಗೆ ಕಳಿಸುತ್ತೇನೆ ಎಂದಿದ್ದರು. ತಕ್ಷಣವೇ ಹಣದ ಹೊಂದಾಣಿಕೆ ಆಗದ ಕಾರಣ ಸಮಯ ಕೇಳಿದ್ದೆವು. ಅಲ್ಲದೇ ಖರೀದಿಸುವ ಜಮೀನಿನಲ್ಲಿ ಎಷ್ಟು ಫಲಾನುಭವಿಗಳಿಗೆ ನಿವೇಶನ ಸಿಗಬಹುದು ಎನ್ನುವ ಮಾಹಿತಿ ಸಿಕ್ಕರೆ ಹಣ ಪಡೆಯಲು ಅನುಕೂಲ ಆಗುತ್ತದೆ. ಆದರೆ ಈವರೆಗೆ ಯಾವುದೇ ಮಾಹಿತಿ ದೊರೆತಿಲ್ಲ. ಕಾರಣ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಪಳನಿಸ್ವಾಮಿ, ಚಂದ್ರಶೇಖರಯ್ಯ, ಅಶೋಕ್ , ನಾಗರಾಜ್ ಸೇರಿದಂತೆ ಗೂಡ್ಸ್ ವಾಹನಗಳ ಮಾಲೀಕರು, ಚಾಲಕರು ಪಾಲ್ಗೊಂಡಿದ್ದರು.