ಬೆಂಗಳೂರು, ಮಾ.16- ಇಲ್ಲಿನ ವಿಕ್ಟೋರಿಯ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೋವ್ಯಾಕ್ಸಿನ್ ಲಸಿಕೆ ಪಡೆದರು.
ಲಸಿಕೆ ಪಡೆಯಲು ಯಾರೂ ಭಯ ಪಡಬೇಕಾಗಿಲ್ಲ. ಸೂಜಿ ಚುಚ್ಚುವುದು ಗೊತ್ತೇ ಆಗುವುದಿಲ್ಲ. ಇರುವೆ ಕಚ್ಚಿದಷ್ಟೂ ನೋವು ಆಗುವುದಿಲ್ಲ ಎಂದು ತಮ್ಮ ಸ್ವಾನುಭವದಿಂದ ಹೇಳಿದ ಶ್ರೀಗಳು, ಕೊರೊನಾ ಪಿಡುಗು ಹೋಗಲಾಡಿಸಲು ಲಸಿಕೆ ಪಡೆಯುವುದೇ ಏಕೈಕ ಮಾರ್ಗವಾಗಿದ್ದು, ಯಾವುದೇ ಭಯವಿಲ್ಲದೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕರೆ ನೀಡಿದರು.
`ಮನೆ ಗೆದ್ದು ಮಾರು ಗೆಲ್ಲು’ ಎನ್ನುವಂತೆ ನಮ್ಮ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆಯನ್ನು ಕೊಡುವುದಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಯನ್ನು ಪೂರೈಕೆ ಮಾಡುತ್ತಿರುವ ಭಾರತದ ಪ್ರಧಾನಿ ಮೋದಿಯವರ ಮಾನವೀಯ ದೃಷ್ಟಿಯನ್ನು ಶ್ರೀಗಳು ಶ್ಲ್ಯಾಘಿಸಿದರು.
ಇದು ಸಹಸ್ರಾರು ವರ್ಷಗಳ ಹಿಂದೆ `ವಸುದೈವ ಕುಟುಂಬಕಮ್’ ಎಂದು ಬೋಧಿಸಿದ ಉಪನಿಷತ್ತಿನ ಸೂಕ್ತಿಗೆ ಮತ್ತು `ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲಸಂಗನ ಶರಣರೇ ಕುಲಜರು’ ಎನ್ನುವ ಬಸವಣ್ಣನವರ ಆಶಯಕ್ಕೆ ಪೂರಕವಾಗಿದೆ. ಮನುಜ ಕುಲವನ್ನು ಸಂರಕ್ಷಿಸಿದ ಮಹಾನ್ ರಾಷ್ಟ್ರ ಭಾರತವಾಗಲಿದೆ ಎಂದು ಶ್ರೀಗಳು ಬಣ್ಣಿಸಿದ್ದಾರೆ.