ದಾವಣಗೆರೆ, ಮಾ.16- ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ದೇಶವ್ಯಾಪಿ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ 2 ದಿನಗಳು ಬ್ಯಾಂಕ್ ಮುಷ್ಕರ ನಡೆಯಿತು.
ಇಂದು ಸಹ ಸೇವೆಯಿಂದ ಹೊರಗುಳಿದಿದ್ದ ಬ್ಯಾಂಕ್ ಉದ್ಯೋಗಿಗಳು ನಗರದ ಮಂಡಿಪೇಟೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನಾ ಮತ ಪ್ರದರ್ಶನ ನಡೆಸಿ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಸರ್ಕಾರದ ಗಮನ ಸೆಳೆದರು.
ಬ್ಯಾಂಕ್ ಖಾಸಗೀಕರಣ ನಿರ್ಧಾರ ಹಿಂಪಡೆಯಬೇಕು. ಸಾರ್ವಜನಿಕ ಬ್ಯಾಂಕುಗಳು ದೇಶದ ಆಸ್ತಿ, ಅವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಬ್ಯಾಂಕ್ ಸೌಲಭ್ಯ ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಬೇಕು. ಸಾರ್ವಜನಿಕ ಬ್ಯಾಂಕ್ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತಾರಗೊಳಿಸಬೇಕೇ ವಿನಃ ಖಾಸಗೀಕರಣದ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಕುಚಿತಗೊಳಿಸಬಾರದು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಕೆ.ಎನ್. ಗಿರಿರಾಜ್ ಮಾತನಾಡಿ, ಬ್ಯಾಂಕುಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು. ವಿವಿಧ ಬ್ಯಾಂಕುಗಳಲ್ಲಿರುವ 148 ಲಕ್ಷ ಕೋಟಿ ಜನರ ಠೇವಣಿಗೆ ಸರ್ಕಾರವೇ ರಕ್ಷಣೆ ನೀಡಬೇಕೇ ಹೊರತು ಲೂಟಿಕೋರ ಬಂಡವಾಳ ಶಾಹಿಗಳಿಂದ ಸಾಧ್ಯವಿಲ್ಲ. ದೇಶಕ್ಕೆ ಮಾಸ್ ಬ್ಯಾಂಕಿಂಗ್‍ನ ಅಗತ್ಯವಿದೆಯೇ ಹೊರತು ಕ್ಲಾಸ್ ಬ್ಯಾಂಕಿಂಗ್‍ನ ಅಗತ್ಯವಿಲ್ಲ. ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಬ್ಯಾಂಕ್ ಖಾಸಗೀಕರಣದ ವಿರುದ್ಧದ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಮಾತನಾಡುತ್ತಾ, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ವಸೂಲಾಗದೇ ಇರುವ ಸಾಲವನ್ನು ವಸೂಲು ಮಾಡಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆದರೆ ಬ್ಯಾಂಕ್ ಉದ್ಯೋಗಿಗಳ ಹೋರಾಟದ ದಿಕ್ಕು ತಪ್ಪಿಸುವು ದಕ್ಕಾಗಿ ಬ್ಯಾಂಕ್ ಖಾಸಗೀಕರಣದ ನಿರ್ಧಾರವನ್ನು ಪ್ರಕಟಿಸಿರುವುದು ಸರಿಯಲ್ಲ ಎಂದು ಖಂಡಿಸಿದರು.
ಸಾವಿರ ಕೋಟಿಯಷ್ಟು ಬ್ಯಾಂಕ್ ವ್ಯವಹಾರ ಸ್ಥಗಿತ
ದೇಶದಾದ್ಯಂತ ಖಾಸಗಿ ಬ್ಯಾಂಕುಗಳ ಸೇವೆಯನ್ನು ಹೊರತುಪಡಿಸಿ ಬ್ಯಾಂಕಿಂಗ್ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಹಾಗೂ ಗ್ರಾಮೀಣ ಬ್ಯಾಂಕಿನ ಉದ್ಯೋಗಿಗಗಳು ಮುಷ್ಕರದಲ್ಲಿ ಭಾಗವಹಿಸಿದ್ದರು. ಅಂದಾಜಿನ ಪ್ರಕಾರ ಸುಮಾರು ಲಕ್ಷಾಂತರ ಕೋಟಿ ರೂ.ಗಳ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿತ್ತು. ಜಿಲ್ಲೆಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಒಟ್ಟು 240 ಬ್ಯಾಂಕ್ ಶಾಖೆಗಳು ಬಂದ್ ಆಗಿದ್ದವು. ಇದರಿಂದ ಎರಡು ದಿನಗಳಲ್ಲಿ ಈ ಎಲ್ಲಾ ಶಾಖೆಗಳು ಸೇರಿ ಅಂದಾಜು ಸಾವಿರ ಕೋಟಿಯಷ್ಟು ಬ್ಯಾಂಕ್ ವ್ಯವಹಾರ ಸ್ಥಗಿತವಾಗಿದೆ. 1200 ಬ್ಯಾಂಕ್ ಉದ್ಯೋಗಿಗಳು ಸೇವೆಯಿಂದ ದೂರ ಉಳಿದಿದ್ದರು. ಸೇವೆ ಸಿಗದೇ ಗ್ರಾಹಕರು ಪರದಾಡಿದರು.
ಹೋರಾಟಕ್ಕೆ ಬೆಂಬಲ: ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಮುಷ್ಕರದಲ್ಲಿ ಪಾಲ್ಗೊಂಡು ಬ್ಯಾಂಕ್ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘದ ಕೆ.ಹೆಚ್. ದಪ್ಪೇರ್, ಎನ್‍ಓಬಿಓ ಸಂಘಟನೆಯ ನಾಯಕ ಎನ್. ರಾಮಮೂರ್ತಿ, ಎಐಬಿಓಸಿ ಸಂಘಟನೆಯ ಆನಂದಮೂರ್ತಿ, ಎಐಬಿಓಎ ಸಂಘಟನೆಯ ಪಿ.ಆರ್. ಪುರುಷೋತ್ತಮ್, ಎನ್‍ಸಿಬಿಇ ಸಂಘಟನೆಯ ಎಂ.ಎಸ್. ವಾಗೀಶ್, ಎನ್‍ಓಬಿಡಬ್ಲ್ಯು ಸಂಘಟನೆಯ ಎನ್. ಪ್ರಶಾಂತ್, ಬ್ಯಾಂಕ್ ನಿವೃತ್ತರ ಒಕ್ಕೂಟದ ಅಜಿತ್‍ಕುಮಾರ್ ನ್ಯಾಮತಿ ಹಾಗೂ ಜಿ.ಬಿ. ಶಿವಕುಮಾರ್ ಮಾತನಾಡಿದರು.
ಮುಷ್ಕರದಲ್ಲಿ ಕೆ. ವಿಶ್ವನಾಥ ಬಿಲ್ಲವ, ಹೆಚ್.ಜಿ. ಸುರೇಶ್, ಹೆಚ್.ಎಸ್. ತಿಪ್ಪೇಸ್ವಾಮಿ, ಕೆ. ಶಶಿಶೇಖರ್, ಎಂ.ಪಿ. ಕಿರಣಕುಮಾರ್, ಸಿ. ಪರಶುರಾಮ, ಕಾಡಜ್ಜಿ ವೀರಪ್ಪ, ಕೆ. ರವಿಶಂಕರ್, ಅಜಯ್‍ಕುಮಾರ್, ಸುರೇಶ್ ಚೌಹಾಣ್, ಶಿವಮೂರ್ತಿ ಪೂಜಾರ್, ನಿತ್ಯಾನಂದ ಡೋಂಗ್ರೆ, ಡಿ. ರಾಮಕೃಷ್ಣ, ಸಿ. ದುರುಗಪ್ಪ, ಸಿ.ಹೆಚ್.ಎಂ. ದೀಪಾ, ಎಸ್. ಪ್ರಶಾಂತ್, ಶಂಭು ಹಿರೇಮಠ್, ಐಶ್ವಯ ಕಠಾರೆ, ವಿ.ಆರ್. ಹರೀಶ್, ಎನ್.ಜಿ. ಉಷಾ, ಸಿದ್ದಲಿಂಗೇಶ್ ಕೋಡಿ, ಎಂ. ಬಸವರಾಜ್, ಪ್ರದೀಪ್‍ಕುಮಾರ್, ಹೆಚ್. ಪ್ರದೀಪ್, ಪಿ. ನಾಗರಾಜ್, ಮಹಮ್ಮದ್ ಫೈಯಾಜ್, ಬಿ.ಎನ್. ದರ್ಶನ್, ಸುಜಯಾ ನಾಯಕ್, ಕೆ. ಜಯಲಕ್ಷ್ಮಿ, ರೇಣುಕಮ್ಮ, ಸುಮಂತ್ ಭಟ್, ರೇಖಾ, ಗಾಯತ್ರಿ, ಎಸ್.ನಾಗರಾಜ್, ಟಿ. ಸುಭಾಷ್‍ಚಂದ್ರ, ನಾಗೇಶ್ವರಿ ಆರ್. ನಾಯರಿ, ಶಿವಕುಮಾರ್, ಎ. ವಿರುಪಾಕ್ಷಯ್ಯ, ಸಿದ್ದಾರ್ಥ, ಜಿ.ಎಸ್. ಹರೀಶ್, ಹೆಚ್.ಆರ್. ಮಂಜುನಾಥ್, ಜಿ.ಟಿ. ಹರೀಶ್, ಸಂಧ್ಯಾ, ಸಾವಿತ್ರಿ, ಸುನೀತ, ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಅಜಿತ್‍ಕುಮಾರ್ ನ್ಯಾಮತಿ, ಜಿ.ಬಿ.ಶಿವಕುಮಾರ್, ಜೆ.ಓ. ಮಹೇಶ್ವರಪ್ಪ, ಅಯೂಬ್ ಆಲಿಖಾನ್, ರಘುನಾಥ್ ರಾವ್ ತಾಪ್ಸೆ ಮತ್ತಿತರರು ಭಾಗವಹಿಸಿದ್ದರು.