ರಾಜ್ಯ ಬಜೆಟ್ : ಜಗಳೂರಿನಲ್ಲಿ ತಹಶೀಲ್ದಾರ್‌ಗೆ ಮನವಿ

ಜಗಳೂರು, ಮಾ.15- ತಮ್ಮ ಬೇಡಿಕೆಗಳನ್ನು ಈಡೇರಿಸದ 2021-22ರ ಬಜೆಟ್‌ ಅನ್ನು ವಿರೋಧಿಸಿ ಎಐಟಿಯುಸಿ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ವ್ಯಾಪಿ ಹೋರಾಟವನ್ನು ಬೆಂಬಲಿಸಿ, ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ವೃತ್ತ, ದಾವಣಗೆರೆ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಐಟಿಯುಸಿ ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್ ಬಾಷಾ ಮಾತನಾಡಿ, ಮಾರ್ಚ್ 2 ರಂದು ಬೆಂಗಳೂರು ಚಲೋ ಹೋರಾಟ ನಿರತರಾಗಿದ್ದ ವೇಳೆ ಸಂಘಟನೆಯ ಮುಖಂಡರುಗಳ ಸಮ್ಮುಖದಲ್ಲಿ ಸಭೆ ಕರೆದು ಸರ್ಕಾರ ಬಜೆಟ್‌ನಲ್ಲಿ ಬೇಡಿಕೆಗಳ ಈಡೇರಿಕೆಗೆ ನೀಡಿದ್ದ ಭರವಸೆ ಹುಸಿಯಾಗಿದೆ ಎಂದರು.

2015 ನಂತರ ನಿವೃತ್ತಿಯಾಗಿರುವ 7294 ಕಾರ್ಯ ಕರ್ತೆಯರಿಗೆ ಮಾಸಿಕ ಪಿಂಚಣಿ 5,000 ರೂಪಾಯಿ ಹಾಗೂ ಕಾರ್ಯಕರ್ತೆಯರ ಹಿರಿತನದ ಸೇವೆ ಪರಿಗಣಿಸಿ ಗೋವಾ ಮಾದರಿಯಲ್ಲಿ ಗೌರವ ಧನ ನಿಗದಿಗೊಳಿಸಬೇಕು, ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿ, ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.

ಎಐಎಸ್‌ಎಫ್‌ ರಾಜ್ಯ ಮುಖಂಡ ಮಾದಿ ಹಳ್ಳಿ ಮಂಜುನಾಥ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಿರುವುದು ಖಂಡನೀಯ ಎಂದರು.

ಫೆಡರೇಷನ್‌ನ ತಾಲ್ಲೂಕು ಗೌರವಾಧ್ಯಕ್ಷೆ ಸುಶೀಲಮ್ಮ, ತಾಲ್ಲೂಕು ಅಧ್ಯಕ್ಷೆ ಹಾಲಮ್ಮ, ಪದಾಧಿಕಾರಿಗಳಾದ ನಾರಮ್ಮ, ಬಸವಣ್ಯಮ್ಮ, ಭರಮಕ್ಕ, ಗೌರಮ್ಮ, ಶಶಿಕಲಾ, ಪುಷ್ಪ, ಶಾಂತವೀರಮ್ಮ, ನಾಗರತ್ನಮ್ಮ, ಜಯಮ್ಮ, ಭಾಗ್ಯಮ್ಮ, ಕಮಲಮ್ಮ, ಮಂಜಮ್ಮ ಮತ್ತಿತರರು ಭಾಗವಹಿಸಿದ್ದರು.

error: Content is protected !!