ಮಲೇಬೆನ್ನೂರು ಪುರಸಭೆ ಅಧ್ಯಕ್ಷರಾಗಿ ಶ್ರೀಮತಿ ಆಯ್ಕೆ

ಮೊದಲ ಬಾರಿಗೆ ಅಧ್ಯಕ್ಷ ಗಾದಿ ಹಿಡಿದ ಬಿಜೆಪಿಯಿಂದ ವಿಜಯೋತ್ಸವ

ಪುರಸಭೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿದ ವಾಗೀಶ್ ಸ್ವಾಮಿ ಅವರಿಗೆ ಸಿದ್ದೇಶ್ವರ, ಹರೀಶ್ ಮೆಚ್ಚುಗೆ

ಮಲೇಬೆನ್ನೂರು, ಮಾ.15- ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ 3ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಶ್ರೀಮತಿ ಪಾನಿಪೂರಿ ರಂಗನಾಥ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ 7, ಜೆಡಿಎಸ್‌ನ 5 ಹಾಗೂ ಪಕ್ಷೇತರ ಸದಸ್ಯರಾದ ಮಹಾಲಿಂಗಪ್ಪ ಮಾಸಣಗಿ ಶೇಖರಪ್ಪ ಮತ್ತು ಕಾಂಗ್ರೆಸ್‌ನ 9 ಸದಸ್ಯರ ಪೈಕಿ ಎ.ಆರೀಫ್‌ ಅಲಿ, ದಾದಾವಲಿ ಮಾತ್ರ ಹಾಜರಿದ್ದರು.

ಒಟ್ಟು 23 ಸದಸ್ಯರ ಪೈಕಿ 16 ಜನ ಸದಸ್ಯರು ಮಾತ್ರ ಭಾಗವಹಿಸಿದ್ದರು. 7 ಜನ ಕಾಂಗ್ರೆಸ್‌ ಸದಸ್ಯರು ಗೈರು ಹಾಜರಾಗಿದ್ದರು. ಬಿಜೆಪಿಯ ಐವರು ನಾಮಿನಿ ಸದಸ್ಯರಿಗೆ ಮತದಾನದ ಹಕ್ಕು ಇಲ್ಲದ ಕಾರಣ ಸಭೆಗೆ ಆಹ್ವಾನ ಇರಲಿಲ್ಲ.

ಬಿಜೆಪಿ-ಜೆಡಿಎಸ್ ಪಕ್ಷಗಳ ಒಪ್ಪಂದಂತೆ ಜೆಡಿಎಸ್‌ನ ಶ್ರೀಮತಿ ನಾಹೀದ ಅಂಜುಂ ಸೈಯದ್ ಇಸ್ರಾರ್ ಅವರು ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಜೆಡಿಎಸ್ ಕೊಟ್ಟ ಮಾತಿಗಿಂತ ಒಂದು ತಿಂಗಳು ತಡವಾಗಿ ಬಿಜೆಪಿಯವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿತು. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಅವರ ಅಧಿಕಾರ ಮೇ 24 ಕ್ಕೆ ಅಂತ್ಯಗೊಳ್ಳಲಿದೆ.

ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಉಪತಹಶೀಲ್ದಾರ್ ಆರ್.ರವಿ, ಚುನಾವಣೆ ಶಾಖೆಯ ಸೋಮಶೇಖರ್, ಪ್ರಶಾಂತ್ ಪುರಸಭೆಯ ವ್ಯವಸ್ಥಾಪಕ ದಿನಕರ್ ಹಾಜರಿದ್ದು ಸಹಕರಿಸಿದರು.

ಪರೀಕ್ಷಾರ್ಥ ಉಪವಿಭಾಗಾಧಿಕಾರಿ ಶ್ರೀಮತಿ ದುರ್ಗಾಶ್ರೀ ಅವರು ಉಪಸ್ಥಿತರಿದ್ದರು.

ಬಿಜೆಪಿ ವಿಜಯೋತ್ಸವ : ಮಲೇಬೆನ್ನೂರು ಪುರಸಭೆಯ 5 ವರ್ಷದ ಅವಧಿಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಅಧ್ಯಕ್ಷ ಗಾದಿ ಹಿಡಿದಿದ್ದು, ಚುನಾವಣೆ ನಂತರ ಬಿಜೆಪಿ ವಿಜಯೋತ್ಸವ ಆಚರಿಸಿತು. ಎಲ್ಲೆಡೆ ಬಿಜೆಪಿ ಬಾವುಟಗಳು ರಾರಾಜಿಸಿದವು. ಮೆರವಣಿಗೆ ಮೂಲಕ ಪಟ್ಟಣದ ಬಸವೇಶ್ವರ ದೇವಸ್ಥಾನ ಹಾಗೂ ಗ್ರಾಮ ದೇವತೆಗಳಾದ ಏಕನಾಥೇಶ್ವರ, ಕೋಡಿ ಮಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಯಶಸ್ವಿ : 2016ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ 7 ಸದಸ್ಯರನ್ನು ಆಯ್ಕೆ ಮಾಡುವಲ್ಲಿ ಶ್ರಮ ವಹಿಸಿ ಯಶಸ್ವಿಯಾಗಿದ್ದ ಬಿಜೆಪಿ ಮುಖಂಡ ಹಾಗೂ ಜಿ.ಪಂ. ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಅವರು ಜೆಡಿಎಸ್‌ನವರನ್ನು ಮತ್ತು ಪಕ್ಷೇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪುರಸಭೆಯಲ್ಲಿ ಕಿಂಗ್‌ಮೇಕರ್ ಆಗಿದ್ದರು.

ಇದೀಗ ಬಿಜೆಪಿಯ ಶ್ರೀಮತಿ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸುವಲ್ಲಿ ಯಶಸ್ವಿಯಾದ ವಾಗೀಶ್ ಸ್ವಾಮಿ ಅವರಿಗೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.

ಮಲೇಬೆನ್ನೂರು ಪುರಸಭೆ ಅಧ್ಯಕ್ಷರಾಗಿ ಶ್ರೀಮತಿ ಆಯ್ಕೆ - Janathavani

ಅಭಿನಂದನೆ : ಚುನಾವಣೆ ನಂತರ ನೂತನ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್ ಅವರನ್ನು ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್‌ರಾವ್ ಜಾಧವ್, ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ನಾಹೀದ ಅಂಜುಂ ಸೈಯದ್ ಇಸ್ರಾರ್ ಸೇರಿದಂತೆ ಪುರಸಭೆಯ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ನಾಮಿನಿ ಸದಸ್ಯರು, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಬಿಜೆಪಿ ಮುಖಂಡರಾದ ಕೆ.ಜಿ.ವೀರನಗೌಡ, ಮುದೇಗೌಡ್ರ ತಿಪ್ಪೇಶ್, ಬಿ.ಬಸವರಾಜಪ್ಪ, ಎಸ್.ಕರಿಬಸಪ್ಪ, ನಿಟ್ಟೂರಿನ ಇ.ಎಂ. ಮರುಳಸಿದ್ದೇಶ್, ಜಿಗಳಿಯ ಚಂದ್ರಪ್ಪ, ಪಾಟೀಲ್, ಹನುಮಗೌಡ, ಕುಂಬಳೂರಿನ ಹೊರಟ್ಟಿ ರಾಜು, ಕೊಮಾರನಹಳ್ಳಿಯ ಕೆ.ಉಜ್ಜೇಶ್, ಐರಣಿ ಮಹೇಶ್ವರಪ್ಪ, ಆಶ್ರಯ ಸಮಿತಿ ಸದಸ್ಯ ಬಿ.ಚಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಅಭಿನಂದಿಸಿದರು.

error: Content is protected !!