ಹರಪನಹಳ್ಳಿ ನ್ಯಾ. ಉಂಡಿ ಮಂಜುಳಾ ಶಿವಪ್ಪ
ಹರಪನಹಳ್ಳಿ, ಮಾ.14- ಸ್ವ ಪ್ರತಿಷ್ಠೆ ಬಿಟ್ಟು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬನ್ನಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ. ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಬುಡಕಟ್ಟು ಮಹಾಸಭಾ, ಎಸ್.ಸಿ. ಎಸ್.ಟಿ. ಸಮುದಾಯಗಳ ಮಹಾ ಒಕ್ಕೂಟ (ರಿ.) ಇವರ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಭಾರತ ಅಮೃತ ಮಹೋತ್ಸವ 2021ರ ಅಂಗವಾಗಿ ಬುಡಕಟ್ಟು ಜನಾಂಗದವರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಹುಟ್ಟುವಾಗ ಜಾತಿ ಹೆಸರು ಹೇಳಿಕೊಂಡು ಹುಟ್ಟಿರುವುದಿಲ್ಲ. ಆದರೆ, ಮನುಷ್ಯ ಬೆಳೆಯುತ್ತಾ ಅವರ ಕಾಯಕದ ಮೇಲೆ ಜಾತಿ ಹೆಸರು ಬೆಳೆಯುತ್ತಾ ಬಂದಿತು. ತಾಲ್ಲೂಕಿನಲ್ಲಿ ಬುಡ್ಗ ಜಂಗಮ.
ಹಂದಿ ಜೋಗಿ, ಚೆನ್ನ ದಾಸರ, ಶಿಂದೋಳ, ಕಿಳ್ಳಿಕ್ಯಾತ, ಸಿಳ್ಳಿ ಕ್ಯಾತ, ಡೊಂಬರು ಸೇರಿದಂತೆ ಅನೇಕ ಅಲೆಮಾರಿ ಬುಡಕಟ್ಟು ಸಮುದಾಯಗಳು ಜೀವಿಸುತ್ತಿದ್ದು, ಅವರಲ್ಲಿ ಸ್ವಂತ ನೆಲೆ ಇಲ್ಲದವರಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ವಂತ ಸೂರು, ವ್ಯವಸಾಯ ಮಾಡಲು ಭೂಮಿಯನ್ನು ಸರ್ಕಾರವೇ ಖರೀದಿ ಮಾಡಿಕೊಡುತ್ತದೆ.
ನಿಮ್ಮ ದಿನನಿತ್ಯದ ಸಮಸ್ಯೆಗಳಿದ್ದರೆ ನೇರವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಅಂಬೇಡ್ಕರ್ ಪಟ್ಟ ಶ್ರಮ ಅವಿರತವಾಗಿದ್ದು, ಬರೀ ಬಲ್ಲಿದರಿಗೆ ಸೀಮಿತವಾಗಿದ್ದ ಶಿಕ್ಷಣ ಇಂದು ಎಲ್ಲ ಜನಾಂಗದವರಿಗೂ ಸಿಗುವಂತಹ ವ್ಯವಸ್ಥೆ ಇದ್ದು, ಶೋಷಿತರು ಕೂಡ ಶಿಕ್ಷಣ ಕಲಿತು ಮುಖ್ಯವಾಹಿನಿಗೆ ಬರಬೇಕು ಎಂದರು.
ಜಿಲ್ಲಾ ಅಲೆಮಾರಿ ಬುಡಕಟ್ಟು ಸಮುದಾಯಗಳ ಅಧ್ಯಕ್ಷ ಸಣ್ಣ ಅಜ್ಜಯ್ಯ ಮಾತನಾಡಿದರು.
ಗೊಂದಲಿಗ ಸಮಾಜದ ಗೋಪಾಲ. ಅಣ್ಣಪ್ಪ, ಮೇದಾರ ಕೃಷ್ಣಪ್ಪ ಸೇರಿದಂತೆ ಇತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಕೀಲರುಗಳಾದ ಕೆ. ಉಚ್ಚೆಂಗೆಪ್ಪ, ಮೃತ್ಯುಂಜಯ ಎಂ., ನಾಗರಾಜ ನಾಯ್ಕ. ನಿಲಯ ಪಾಲಕರಾದ ಯಾಸ್ಮಿನ್‌ಬಾನು, ಯಲ್ಲಮ್ಮ ಸೇರಿದಂತೆ ಇತರರು ಇದ್ದರು.