ಡಿಸಿಎಂ ಟೌನ್‌ಶಿಪ್‌ನಲ್ಲಿ ಮಹಾಶಿವರಾತ್ರಿ ಆಚರಣೆ

ದಾವಣಗೆರೆ, ಮಾ.14- ನಗರದ ಡಿ.ಸಿ.ಎಂ ಟೌನ್‌ಷಿಪ್‌ನ ನಾಗರಿಕರ ಹಿತರಕ್ಷಣಾ ಸಂಘ ದಿಂದ ರಾಜನಹಳ್ಳಿ ಹನುಮಂತಪ್ಪ ಉದ್ಯಾನವನ ದಲ್ಲಿ 16ನೇ ವರ್ಷದ ಮಹಾಶಿವರಾತ್ರಿ ಜಾಗರಣೆ ಹಾಗೂ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು.

ಮಹಾನಗರ ಪಾಲಿಕೆಯ ಮಹಾಪೌರ ಎಸ್‌.ಟಿ. ವೀರೇಶ್‌ ಉದ್ಘಾಟಿಸಿ  ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಗುಣಮಟ್ಟದ ರಸ್ತೆ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಗ್ರಂಥಾಲಯ ಸ್ಥಾಪಿಸುವುದಕ್ಕೆ ಆದ್ಯತೆ ಕೊಡಲಾಗುವುದು ಎಂದು ತಿಳಿಸಿದರು. 

ನನಗೆ ಸನ್ಮಾನ ಬೇಡ. ಜನರಿಗೆ ಉಪಯೋಗವಾಗುವ ಕೆಲಸಕ್ಕೆ ಆದ್ಯತೆ ನೀಡಿ, ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದರು.

ಅತಿಥಿಗಳಾದ ಡಿವೈಎಸ್‌ಪಿ ಪಿ.ಬಿ. ಪ್ರಕಾಶ್‌ ಅವರು, ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಛಲ ಬೇಕು. ಛಲ ಸಾಧಿಸಲು ಇಂದೇ ಸಂಕಲ್ಪ ಮಾಡಿ ಎಂದು ತಿಳಿಸಿ, ಸಮಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಗೌರವಿಸಿದರು.

ಪ್ರಾಂಶುಪಾಲ ಕೆ.ಹೆಚ್‌. ಮಂಜುನಾಥ ರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವಾಮದೇವಪ್ಪ ಈಚಘಟ್ಟ ಸ್ವಾಗತಿಸಿದರು, ಖಜಾಂಚಿ ಎಸ್‌.ವಿ. ವಿಶ್ವನಾಥ್‌ ವಂದನಾರ್ಪಣೆ ಸಲ್ಲಿಸಿದರು. 

ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಸುಮಾ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ಸಾಂಬೋಜಿರಾವ್‌, ಸುರೇಂದ್ರ ಮೊಯ್ಲಿ,
ಕೆ. ನಾಗರಾಜ್, ತಿರುಮಲೈ ಉಪಸ್ಥಿತರಿದ್ದರು.

ಕು. ಕೆ.ಬಿ. ಚಿನ್ಮಯಿ ಪಾರ್ಥಿಸಿದರು. ಕಾರ್ಯಕ್ರಮದಲ್ಲಿ ಭಕ್ತಿ ಸಿಂಚನ, ಲಂಬಾಣಿ ನೃತ್ಯ ನಡೆಯಿತು. ಕಾರ್ಯಕ್ರಮವನ್ನು ಶಿಕ್ಷಕ ಕೆ.ಸಿ. ಬಸವರಾಜ್ ನಿರೂಪಿಸಿದರು.

error: Content is protected !!