ದೇಶಕ್ಕೆ ಮಿಲಿಟರಿಗಿಂತ ಸಾಮರಸ್ಯದ ಬಲ ಬಹಳ ಮುಖ್ಯ

ದೊಡ್ಡಘಟ್ಟ : ಸಾಮರಸ್ಯಕ್ಕಾಗಿ ಸಂಕಲ್ಪ ಕಾರ್ಯಕ್ರಮದಲ್ಲಿ ತೇಜಸ್ವಿ ಪಟೇಲ್‌ ಅಭಿಮತ

ತ್ಯಾವಣಿಗಿ, ಮಾ.14- ನಮ್ಮ ದೇಶಕ್ಕೆ ಮಿಲಿಟರಿಗಿಂತ ಸಾಮರಸ್ಯದ ಬಲ ಬಹಳ ಮುಖ್ಯವಾಗಿದೆ ಎಂದು ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್‌ ಹೇಳಿದರು.

ಅವರು ಭಾನುವಾರ ದೊಡ್ಡಘಟ್ಟ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತಂದಿರುವ ಸಾಮರಸ್ಯ ಸಂಭ್ರಮ ವೇದಿಕೆ ವತಿಯಿಂದ `ಸಾಮರಸ್ಯಕ್ಕಾಗಿ ಸಂಕಲ್ಪ’ ಎಂಬ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ನವಿಲೇಹಾಳ್‌ ಗ್ರಾ.ಪಂ. ಸರ್ವ ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಭಾರತೀಯರ ನಿಜವಾದ ಶತ್ರು ಜಾತಿ ಆಗಿದ್ದು, ಜಾತಿ, ಕೋಮುವಾದ ಹೋಗದ ಹೊರತು ದೇಶದಲ್ಲಿ ಶಾಂತಿ, ಸಾಮರಸ್ಯ ನಿರ್ಮಾಣ ಕಷ್ಟಸಾಧ್ಯ ಎಂದ ಅವರು, ಮಾರಿಹಬ್ಬ ಮಾಡುವಾಗ ಒಂದಾಗುವ ನಾವು, ಚುನಾವಣೆ ಬಂದಾಗ ದೂರವಾಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ದೂರವಿಡುವುದು ಮಾನವೀಯತೆಯೇ? ಎಂದು ಪ್ರಶ್ನಿಸಿದ ತೇಜಸ್ವಿ ಪಟೇಲ್‌ ಅವರು, ಗ್ರಾಮದಲ್ಲಿ ಸಣ್ಣ ಸಮಾಜದವರು ಮುಂದೆ ಬರುವ ಹೆಜ್ಜೆ ಇಟ್ಟರೆ ಅಲ್ಲಿ ಸಾಮರಸ್ಯ ಇದೆ ಎಂದು ಗೊತ್ತಾಗುತ್ತದೆ.

ಮೊದಲಿನಿಂದಲೂ ಶಾಂತಿಯುತವಾಗಿ ನಡೆದು ಕೊಂಡು ಬಂದಿರುವ ದೊಡ್ಡಘಟ್ಟದಲ್ಲಿ ಸಾಮರಸ್ಯದ ಸಂಕಲ್ಪ ಸಾಧ್ಯವಾಗಿದೆ. ಗ್ರಾಮದಲ್ಲಿ ಶಿಕ್ಷಣ, ಸಾಮರಸ್ಯ ಇದ್ದರೆ ಎಲ್ಲರ ಬದುಕು ಬಂಗಾರವಾಗುತ್ತದೆ. ಈ ನಿಟ್ಟಿನಲ್ಲಿ ಸಂಭ್ರಮ ವೇದಿಕೆಯವರು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲು ಶ್ರಮಿಸಬೇಕು. 18 ವರ್ಷದೊಳಗಿನ ಹೆಣ್ಣು ಮಗುವಿನ ಮದುವೆ ಆಗದಂತೆ ನೋಡಿಕೊಳ್ಳ ಬೇಕೆಂದು ತೇಜಸ್ವಿ ಪಟೇಲ್‌ ತಿಳಿಸಿ, ಸಾಮರಸ್ಯ ಸಂಕಲ್ಪ ಎಂಬ ನಿಮ್ಮ ಚಿಂತನೆ ಬಹಳ ದೊಡ್ಡ ಮಹತ್ವ ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಸ್ಥರಿಗೆ ಸಾಮರಸ್ಯದ ಬಗ್ಗೆ ಪ್ರತಿಜ್ಞೆ ಬೋಧಿಸಿದ ಹರಿಹರ ಎಸ್‌ಜೆವಿಪಿ ಕಾಲೇಜಿನ ಪ್ರಾಧ್ಯಾಪಕರೂ, ಚಿಂತಕರೂ ಆದ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಹಳ್ಳಿಗಳಲ್ಲಿ ಜಾತಿ ದೌರ್ಜನ್ಯ ನಿಲ್ಲಬೇಕು. ಜಾತಿಯಿಂದ ಯಾರೂ ಕನಿಷ್ಠರಲ್ಲ, ಗರಿಷ್ಠರೂ ಅಲ್ಲ. ಈ ಕಾರಣಕ್ಕಾಗಿಯೇ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಇನ್ನೂ ಸಾಕಾರಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಾರ್ಶನಿಕರಾರು ಒಂದು ಜಾತಿಗೆ ಸೀಮಿತರಾದವರಲ್ಲ. ನಾವೇ ಅವರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿದ್ದೇವೆ. ಅಂಬೇಡ್ಕರ್‌ ಅವರು ಸಮಗ್ರ ಭಾರತಕ್ಕಾಗಿ ಚಿಂತನೆ ನಡೆಸಿದವರು, ಅವರು ಎಲ್ಲಾ ವರ್ಗದ ಜನರಿಗೆ ಸಂವಿಧಾನದ ಮೂಲಕ ಬಲವಾದ ಹಕ್ಕುಗಳನ್ನು ಕೊಟ್ಟಿದ್ದಾರೆ.

ಕೋಮುವಾದ, ಹಿಂಸೆಯನ್ನು ಸಂಭ್ರಮಿಸುವ ಜನರ ಮಧ್ಯೆ ಸಾಮರಸ್ಯಕ್ಕಾಗಿ ದೊಡ್ಡಘಟ್ಟ ಗ್ರಾಮಸ್ಥರ ಸಂಕಲ್ಪ ದೇಶಕ್ಕೇ ಮಾದರಿ 

– ಡಾ. ಎ.ಬಿ. ರಾಮಚಂದ್ರಪ್ಪ

ಒಗ್ಗಟ್ಟು, ಸೌಹಾರ್ದತೆಯ ಬಗ್ಗೆ ಭಾಷಣ ಮಾಡಿದರೆ ಸಾಲದು, ಅವುಗಳನ್ನು ಕಟ್ಟಿಹಾಕಿ ಬೆಳೆಸಬೇಕು.

– ಸಂತೇಬೆನ್ನೂರು ಫೈಜ್ನಟ್ರಾಜ್‌

ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಎಲ್ಲರೂ ಪೂಜಿಸುವಂತಾದಾಗ ಮಾತ್ರ ಸಮಸಮಾಜ ಹಾಗೂ ಸಾಮರಸ್ಯದ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದ ರಾಮಚಂದ್ರಪ್ಪ ಅವರು, ಹಿಂದೆ ಊರಿಗೊಂದು ಗಣಪತಿಯನ್ನು ಇಟ್ಟು ಸಂಭ್ರಮಿಸುತ್ತಿದ್ದೆವು. ಆದರೀಗ ಓಣಿಗೊಂದು, ಜಾತಿಗೊಂದು ಗಣಪತಿ ಇಡಿಸುವ ಮೂಲಕ ಸಾಮರಸ್ಯ ಕದಡುವ ಪ್ರಯತ್ನ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಬಗ್ಗೆ ಎಚ್ಚರವಾಗಿರಿ ಎಂದು ಗ್ರಾಮಸ್ಥರನ್ನು ಎಚ್ಚರಿಸಿದರು.

ಅಮ್ಮನ ಹಬ್ಬಕ್ಕಾಗಿ ಖರ್ಚು ಮಾಡುವ ದುಡ್ಡನ್ನು ಮಕ್ಕಳ ಶಿಕ್ಷಣಕ್ಕೆ ಮೀಸಲಿಡಿ. ಪ್ರತಿ ವರ್ಷ ಮಾರಿಹಬ್ಬ ಮಾಡುವುದನ್ನು ನಿಲ್ಲಿಸಿ, ಎಷ್ಟೋ ಹಳ್ಳಿಗಳಲ್ಲಿ ಮಾರಿಹಬ್ಬ ವನ್ನು ನಿಷೇಧಿಸಿದ್ದಾರೆ. ಈ ನಿಟ್ಟಿನಲ್ಲಿ ದೊಡ್ಡಘಟ್ಟ ಗ್ರಾಮಸ್ಥರು ಹೆಜ್ಜೆ ಇಡಲಿ ಎಂದು ಆಶಿಸಿದರು.

ಊರಿನಲ್ಲಿ ಹಿರಿಯರ ಮಾತನ್ನು ಗೌರವಿಸಿ ಪ್ರೀತಿ, ಸಹನೆಯಿಂದ ಊರಿನ ಸಮಸ್ಯೆಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳಿ. ಕೋಮುವಾದ, ಹಿಂಸೆಯನ್ನು ಸಂಭ್ರಮಿಸುವ ಜನರ ಮಧ್ಯೆ ಸಾಮರಸ್ಯಕ್ಕಾಗಿ ಸಂಕಲ್ಪ ಎಂಬ ಸಂಭ್ರಮವನ್ನು ನಿರ್ಮಾಣ ಮಾಡಿರುವ ದೊಡ್ಡಘಟ್ಟ ಗ್ರಾಮಸ್ಥರು ದೇಶಕ್ಕೇ ಮಾದರಿಯಾಗಿದ್ದಾರೆ ಎಂದು ಎ.ಬಿ. ರಾಮಚಂದ್ರಪ್ಪ ಶ್ಲಾಘಿಸಿದರು.

ನವಿಲೇಹಾಳ್‌ ಗ್ರಾಮದ ಶಕೀಬ್‌ ಎಸ್‌. ಕಣದ್ಮನೆ ಇವರ `ಮೋಹದ ಮೋಡಗಳು’ ಕವನ ಸಂಕಲನವನ್ನು ಬಿಡುಗಡೆ ಮಾಡಿದ ಸಂತೆಬೆನ್ನೂರಿನ ಸಾಹಿತಿ ಫೈಜ್ನಟ್ರಾಜ್‌ ಅವರು ಮಾತನಾಡಿ, ಸಂತೆಬೆನ್ನೂರಿನಲ್ಲಿ ಈ ಹಿಂದೆ ಎಲ್ಲರೂ ಸೇರಿ ಭ್ರಾತೃತ್ವ ಎಂಬ ವೇದಿಕೆಯನ್ನು ಹುಟ್ಟುಹಾಕಿದ ಒಂದೇ ವರ್ಷದಲ್ಲಿ ಮುಚ್ಚಿಹೋಯಿತು. ಆ ರೀತಿ ಈ ಗ್ರಾಮದಲ್ಲಿ ಆಗಬಾರದು, ಸಾಮರಸ್ಯಕ್ಕಾಗಿ ನೀವು ಮಾಡಿರುವ ಸಂಕಲ್ಪ ಸದಾಕಾಲ ಜೀವಂತವಾಗಿ ಉಳಿಯಬೇಕು.

ನವಿಲೇಹಾಳ್‌ ಗ್ರಾಮದ ಶಕೀಬ್‌ ಅವರು ಬರೆದ ಕವನ ಸಂಕಲನವನ್ನು ದೊಡ್ಡಘಟ್ಟದಲ್ಲಿ ಬಿಡುಗಡೆ ಮಾಡಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಅಪರೂಪದ ಕಾರ್ಯಕ್ರಮದ ಬಗ್ಗೆ ನಮ್ಮೆಲ್ಲರ ಮಾತುಗಳು ಕರುಳಿನಿಂದ ಬಂದಿವೆ, ಹೃದಯತುಂಬಿ ಹಾರೈಸಿದ್ದೇವೆ. ಒಗ್ಗಟ್ಟು, ಸೌಹಾರ್ದತೆ ಬಗ್ಗೆ ಭಾಷಣ ಮಾಡಿದರೆ ಸಾಲದು ಅವುಗಳನ್ನು ನಾವು ಗ್ರಾಮದಲ್ಲಿ ಕಟ್ಟಿಹಾಕಿ ಬೆಳೆಸಬೇಕೆಂದು ಫೈಜ್ನಟ್ರಾಜ್ ಹೇಳಿದರು.

ಗ್ರಾಮಸ್ಥರ ಪರವಾಗಿ ಹಿರಿಯರಾದ ಡಿ.ಆರ್‌. ಶಿವಮೂರ್ತಿ ಮಾತನಾಡಿ, ಗ್ರಾಮದ ಯುವಕರು ಇಂತಹ ಕಾರ್ಯಕ್ರಮ ಮಾಡಿ, ನಮ್ಮೆಲ್ಲರ ಹೃದಯವನ್ನು ತೆರೆಸಿದ್ದಾರೆ. ಅವರ ಬುದ್ಧಿವಂತಿಕೆ ಹಾಗೂ ವಿಶಾಲತೆಯನ್ನು ಗ್ರಾಮದಲ್ಲಿ ಪಸರಿಸುವಂತೆ ಮಾಡುತ್ತೇವೆಂದು ಸಂಕಲ್ಪ ಮಾಡಿದರು.

ಈ ಸಂದರ್ಭದಲ್ಲಿ ನವಿಲೇಹಾಳ್‌ ಗ್ರಾಪಂ. ಅಧ್ಯಕ್ಷೆ ಶ್ರೀಮತಿ ಶಬನಂ ಕೋಂ ಮೋಸಿಮಕಿಲ್, ಉಪಾಧ್ಯಕ್ಷೆ ಶ್ರೀಮತಿ ಈರಮಾಂಭ ಕೋಂ ಬಸವರಾಜಪ್ಪ ಸೇರಿದಂತೆ ಎಲ್ಲಾ 16 ಜನ ಗ್ರಾ.ಪಂ. ಸದಸ್ಯರನ್ನು ಹಾಗೂ ದೊಡ್ಡಘಟ್ಟ ಗ್ರಾಮದಿಂದ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಸೋತ ಅಭ್ಯರ್ಥಿಗಳನ್ನೂ ಮತ್ತು ಪಬ್ಲಿಕ್‌ ವಾರಿಯರ್ಸ್‌ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ, ಗೌರವಿಸಿದರು.

ಅಲ್ಲದೆ, ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಯಿತು. ಗ್ರಾಮದ ಮುಖಂಡ ವಿ. ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಕೆ. ಭೀಮಪ್ಪ, ಗೌಡ್ರ ಶಾಂತಕುಮಾರ್‌, ಬೀರೂರು ಕೋಟೆ ರುದ್ರಯ್ಯ, ಎಸ್‌.ಸಿ. ಪ್ರಭುದೇವ್, ಡಿ.ಎಂ. ಕುಬೇರಪ್ಪ, ಡಿ.ಆರ್‌. ಶ್ರೀನಿವಾಸ್‌, ಬಿ. ಸನಾವುಲ್ಲಾ, ಚಂದ್ರಾಚಾರ್‌, ಡಿ.ಎನ್‌. ಜಯಪ್ಪ, ಆರ್‌. ಗಂಗಪ್ಪ, ಶಿವಮೂರ್ತಿ, ಪಕ್ಕೀರಪ್ಪ, ಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು.

ಯುವ ಮುಖಂಡ ಸುನೀಲ್‌ ಸ್ವಾಗತಿಸಿದರು. ಶಿಕ್ಷಕ ತಿಪ್ಪೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘು ದೊಡ್ಮನಿ ನಿರೂಪಿಸಿದರೆ, ಕೊನೆಯಲ್ಲಿ ಷಣ್ಮುಖಯ್ಯ ವಂದಿಸಿದರು. ಈ ಕಾರ್ಯಕ್ರಮಕ್ಕಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.


ಜಿಗಳಿ ಪ್ರಕಾಶ್‌,
[email protected]

error: Content is protected !!