ಹರಿಹರ, ಜು. 30- ನಗರದಲ್ಲಿ ಇಂದು ಅಜ್ಜಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಎ.ಕೆ. ಕಾಲೋನಿ, ಹಳ್ಳದಕೇರಿ, ಹಳೆ ಹರ್ಲಾಪುರ, ಗುತ್ತೂರು, ಅಮರಾವತಿ ಸೇರಿದಂತೆ ಇತರೆ ಭಾಗಗಳಲ್ಲಿ ಭಕ್ತರು ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕ ಮಣ್ಣಿನ ಕುಡಿಕೆಯಲ್ಲಿ ಅರಿಶಿನ, ಕುಂಕುಮ, ವಿಭೂತಿ, ಬಳೆ ಜೊತೆಯಲ್ಲಿ ಐದು ಹೋಳಿಗೆಯನ್ನು ಬಾಳೆ ಎಲೆಯಲ್ಲಿ ನೈವೇದ್ಯ ಮಾಡಿ ಬೇವಿನ ಸೊಪ್ಪಿನ ಮೇಲೆ ದೇವರನ್ನು ಕೂರಿಸಿಕೊಂಡು ಊರಿನ ಹೊರಗಡೆ ಅಗಸಿ ಬಾಗಿಲ ಬಳಿ ಅದನ್ನು ಇಟ್ಟು ಬರುವುದು ಅಜ್ಜಿ ಹಬ್ಬದ ವಿಶೇಷವಾಗಿದೆ.
ಈ ಹಬ್ಬವನ್ನು ದಡಾರದಮ್ಮ, ಸಿಡಿಬು, ಕಾಲರಾ, ಕೊರೊನಾ ಸೇರಿದಂತೆ ಇತರೆ ಕಾಯಿಲೆಗಳು ಚಿಕ್ಕ ಮಕ್ಕಳಿಗೆ ಕಾಣಿಸಿಕೊಳ್ಳದಂತೆ ದೇವಿಗೆ ಆಷಾಢ ಮಾಸದ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಈ ಸಂದರ್ಭದಲ್ಲಿ ಪಿ. ಹರ್ಷವರ್ಧನ, ಧ್ರುವ, ಶಾಂತರಾಜ್, ವಿಜಯಕುಮಾರ್, ಋಷಿಕಾ, ಮಲ್ಲೇಶ್, ರವಿಕಾಂತ್, ಮಹೇಶ್, ಅಜಯ್ ಇತರರು ಹಾಜರಿದ್ದರು.