ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯ

ಹರಿಹರ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಿಹರ, ಮೇ 19- ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಮುಖವಾದ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗದೇ ಇರುವುದರಿಂದ ಭತ್ತದ ಖರೀದಿ ಕೇಂದ್ರವನ್ನು ತೆರೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹರಿಹರ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಅರ್ಪಿಸಲಾಯಿತು.

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ  ಮನವಿ ಸಲ್ಲಿಸಿದ ತಾಲ್ಲೂಕು ರೈತ ಸಂಘದ ಮುಖಂಡರು ಮಾತನಾಡಿ, ಘನ ಸರ್ಕಾರವು ರೈತರು ಬೆಳೆದ ಭತ್ತದ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸದಿರುವ ಬಗ್ಗೆ ಮತ್ತು ಖರೀದಿ ಕೇಂದ್ರವನ್ನು ಈ ತನಕವಾದರೂ ತೆರೆಯದೇ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ರೈತರು ಬೆಳೆ ಬೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ, ರಾಸಾಯನಿಕ ಔಷಧಿ ಮತ್ತು ಕಾರ್ಮಿಕರ ವೆಚ್ಚವನ್ನು ಭರಿಸಿ ಹೆಚ್ಚಿನ ಪ್ರಮಾಣ ದಲ್ಲಿ ಖರ್ಚು ಮಾಡಿರುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ವ್ಯಾಪಾ ರಿಗಳು ಬಾಯಿಗೆ ಬಂದಂತೆ ಭತ್ತವನ್ನು ಮಾರಾಟಕ್ಕೆ ಕೇಳುತ್ತಿದ್ದಾರೆ.  ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು 1,888 ರೂ. ಗಳೆಂದು ಘೋಷಿಸಿದ್ದರೂ ಸಹ, ಮಾರುಕಟ್ಟೆಯಲ್ಲಿ 1,400-1,500 ಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ರೈತರಿಗೆ ಬಂದಿದೆ. ತಹಶೀಲ್ದಾರ್ ಅವರು ತಕ್ಷಣ ಭತ್ತ ಖರೀದಿ ಕೇಂದ್ರ ತೆರೆ ಯುವಂತೆ ಮತ್ತು ದರವನ್ನು 2,500 ರೂ. ಗಳಿಗೆ ನಿಗದಿ ಪಡಿಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಶಂಭುಲಿಂಗಪ್ಪ,  ಪ್ರಧಾನ ಕಾರ್ಯದರ್ಶಿ ಅಂಜಿನಪ್ಪ, ಗುತ್ತೂರು ಗರಡಿ ಮನಿ ಬಸಣ್ಣ, ನಂದಿತಾವರೆ ಡಿ.ಬಿ. ನಂದೀಶ್, ಎನ್.ಪಿ. ರವಿರಾಜ್, ದೀಟೂರು ಡಿ.ಎನ್. ಮಹೇಶ್ ಸೇರಿದಂತೆ ಅನೇಕ ರೈತ ಮುಖಂಡರುಗಳು ಹಾಜರಿದ್ದರು.

error: Content is protected !!