ಹರಪನಹಳ್ಳಿ, ಮಾ.12- ದಿನ ನಿತ್ಯ ಕಚೇರಿ ಅವಧಿಯಲ್ಲಿಯೇ ಸಾರ್ವಜನಿಕರ ಕೈಗೆಟುಕದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ತಡರಾತ್ರಿ ಲೈಟು ಹಾಕಿಕೊಂಡು ಕಾರ್ಯನಿರ್ವಹಿಸಿ ಬಿಲ್ ಬರೆದ ಘಟನೆ ಪಟ್ಟಣದ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿಯಲ್ಲಿ ಬುಧವಾರ ಜರುಗಿದೆ ಎಂದು ತೆಲಿಗಿ ಮಂಜುನಾಥ್ ಆರೋಪ ಮಾಡಿದ್ದಾರೆ.
ಕಳೆದ ರಾತ್ರಿ 11.30ಕ್ಕೆ ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಟ್ಟೂರು ತಾಲ್ಲೂಕುಗಳನ್ನೊಳಗೊಂಡ ಹರಪನಹಳ್ಳಿಯ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿಯಲ್ಲಿ ಮಾರ್ಚ್ ತಿಂಗಳ ಅಂತ್ಯದ ಒಳಗಡೆ ವಾರ್ಷಿಕ ಆಯವ್ಯಯ ಸರಿದೂಗಿಸಿ ಬಿಲ್ ಬರೆದು ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ಸಿಬ್ಬಂದಿ ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.
ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಪೈಪುಗಳು ಒಡೆದು ಹೋಗಿ ನೈರ್ಮಲ್ಯ ಎದ್ದು ಕಾಣುತ್ತದೆ. ಈ ಕುರಿತು ನೂರಾರು ಬಾರಿ ಜನಪ್ರತಿನಿಧಿಗಳು, ಸಾರ್ವಜನಿಕರು ದೂರು ಸಲ್ಲಿಸಿದರೂ ಕ್ಯಾರೇ ಎನ್ನದ ಸದರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಏಕಾಏಕಿ ತಡರಾತ್ರಿ ಬಿಲ್ ಬರೆದಿರುವುದು ಏಕೆ? ಎಂಬ ಪ್ರಶ್ನೆಯನ್ನು ಅವರು ಮಾಡಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ವಾರ್ಷಿಕ ಆಯವ್ಯಯ ಸರಿದೂಗಿಸಿ ಗುತ್ತಿಗೆದಾರರಿಗೆ ಬಿಲ್ ದಯಪಾಲಿಸಲು ತಡ ರಾತ್ರಿವರೆಗೂ ಕಚೇರಿ ತೆರೆದಿಟ್ಟಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಅನುಮಾನಗೊಂಡು ನಾನು ಕಚೇರಿ ಒಳಗಡೆ ಪ್ರವೇಶಿಸಿದರೂ ಸಿಬ್ಬಂದಿ ಯವರು ವಿಚಲಿತರಾಗದೇ ವಿವಿಧ ಗುತ್ತಿಗೆ ಕಾಮಗಾರಿ ಹೆಸರಿನ ದಾಖಲಾತಿ ಪುಸ್ತಕಗಳನ್ನು ಓದುತ್ತಿದ್ದ, ಮತ್ತೊಬ್ಬ ಸಿಬ್ಬಂದಿ ಅವರು ಓದಿದಂತೆ ಬರೆದು ಅಂದಾಜು ಮೊತ್ತವನ್ನು ನಮೂದಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಈ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದರೆ ಮಾರ್ಚ್ ತಿಂಗಳು ಮುಗಿಯುವ ಒಳಗೆ ಗುತ್ತಿಗೆ ಕಾರ್ಯನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಲ್ಲವೇ ಅದಕ್ಕಾಗಿ ತಡರಾತ್ರಿಯಾದರೂ ಕಾರ್ಯನಿರ್ವಹಿಸು ತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆದರೆ ಸತ್ಯ ಹೊರಬರಲಿದೆ ಎಂದು ಮಂಜುನಾಥ್ ಹೇಳಿದ್ದಾರೆ.