ಹರಿಹರದ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಹಟ್ಟಿ ಕರೆ
ಹರಿಹರ, ಜು.29- ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆಯಿಂದ ನೀಡಲಾಗುವ ಅಗತ್ಯ ಸೌಲಭ್ಯಗಳನ್ನು ಅರ್ಹ ಎಲ್ಲಾ ಕಾರ್ಮಿಕರಿಗೂ ಸಕಾಲಕ್ಕೆ ದೊರಕಿಸಿಕೊಡಲು ಸಂಬಂಧಪಟ್ಟವರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಸಿ. ಹಟ್ಟಿ ಕರೆ ನೀಡಿದರು.
ನಗರದ ಕೆಹೆಚ್ಬಿ ಕಾಲೋನಿಯ ನ್ಯಾಯಾಲಯದ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಹುತೇಕ ಕಾರ್ಮಿಕರಿಗೆ ತಮ್ಮ ಹಕ್ಕುಗಳ ಕುರಿತು ಜಾಗೃತಿಯಿರುವುದಿಲ್ಲ. ಸರ್ಕಾರದ ಸೌಕರ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅದರಲ್ಲೂ ದೂರದ ಪ್ರದೇಶ ಗಳಿಂದ ಕೂಲಿ ಅರಸಿ ಬರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳು ಶೋಚನೀಯವಾಗಿ ರುತ್ತವೆ. ಆದ್ದರಿಂದ ಇಲಾಖಾಧಿಕಾರಿಗಳು, ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಇಲಾಖೆಯಿಂದ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿ, ಯಾವೊಬ್ಬ ಕಾರ್ಮಿಕನೂ ಸರ್ಕಾರದ ಸೌಕರ್ಯಗಳಿಂದ ವಂಚಿತರಾಗ ದಂತೆ ನೋಡಿಕೊಳ್ಳಬೇಕು ಎಂದರು.
ಹಿರಿಯ ವಕೀಲ ಮಂಜಪ್ಪ ದೊಡ್ಡಮನಿ ಮಾತನಾಡಿ, ತಾಲ್ಲೂಕಿನಲ್ಲಿ 17,500 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅಸಂಘಟಿತ ಕಾರ್ಮಿಕ ರಾಗಿ ದುಡಿಯುತ್ತಿರುವ ಸಾವಿರಾರು ಜನರು ನೊಂದಣಿ ಮಾಡಿಸಿಲ್ಲ. ಕಾರ್ಮಿಕ ಇಲಾಖಾ ಧಿಕಾರಿಗಳು ಎಲ್ಲರಿಗೂ ಗುರುತಿನ ಚೀಟಿ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಗಳು ಯಶಸ್ವಿ ಯಾಗುವಂತೆ ನೋಡಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಪೂಜಿಸುವ ಕೈಗಳಿಗಿಂತ ಕೆಲಸ ಮಾಡುವ ಕೈಗಳೇ ಶ್ರೇಷ್ಠವೆಂದು 12ನೇ ಶತಮಾನದಲ್ಲೇ ಬಸವಣ್ಣ ತಮ್ಮ ಕಾಯಕವೇ ಕೈಲಾಸ ಎಂಬ ಮಾತಿನ ಮೂಲಕ ಸಾರಿದ್ದಾರೆ. ಕಾರ್ಮಿಕ ರಿಂದ ಅವರ ಕುಟುಂಬ, ಕಾರ್ಖಾನೆ ಮಾತ್ರ ವಲ್ಲದೆ ದೇಶದ ಅಭಿವೃದ್ಧಿ, ಪ್ರಗತಿಯೂ ಸಾಧಿತವಾಗುತ್ತದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್. ಯಶವಂತ್ ಕುಮಾರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾದೇವ್ ಕನಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಲಿಂಗ ರಾಜ್ ಹೆಚ್.ಹೆಚ್., ಎಜಿಪಿ ಜಿ.ಎಸ್.ನವೀನ್ ಕುಮಾರ್, ಎಪಿಪಿಗಳಾದ ನೇತ್ರಾ ವತಿ, ಪ್ರವೀಣ್, ವಕೀಲರಾದ ಬಿ.ಹಾಲಪ್ಪ, ಯೂನಸ್, ಜಿ.ಹೆಚ್.ಭಾಗೀರಥಿ ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.