ಹೊನ್ನಾಳಿ, ಮಾ.11- ಚಹ ಕುಡಿದರೆ ನಿದ್ದೆ ಬರುವುದಿಲ್ಲ ಎಂಬ ಹಿರಿಯರ ಮಾತಿನಂತೆ, ಚಹ ಮಾರಿದ ವ್ಯಕ್ತಿ ಪ್ರಧಾನ ಮಂತ್ರಿಯಾಗಿ ದೇಶದ ಜನರು ನಿದ್ದೆ ಮಾಡದ ಸ್ಥಿತಿ ನಿರ್ಮಾಣ ಮಾಡಿರುವುದು ಸ್ಪಷ್ಟವಾಗುತ್ತಿದೆ ಎಂಬುದಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
ತಾಲ್ಲೂಕು ದಲಿತ ಸಂಘರ್ಷ ಸಮಿತಿ ಬಗರ್ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು, ವಿದ್ಯಾರ್ಥಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಯಾವುದೇ ರೈತರಿಗೆ ಬೇಡವಾದ ಕಾಯ್ದೆಗಳು ನಮ್ಮ ಪ್ರಧಾನಿ ಮೋದಿಗೆ ಬೇಕು. ಸಾಮಾನ್ಯ ಜನತೆಗೆ ಬೇಡವಾದ ಇವಿಎಂ ಮಾತದಾನವು ಇವರಿಗೆ ಬೇಕು.
ಪ್ರಧಾನಿ, ರಾಮಮಂದಿರ ಕಟ್ಟಲು ಜನರಿಂದ ಹಣ ಪಡೆದಿರುವುದು ವಿಪರ್ಯಾಸದ ಸಂಗತಿ. ಅಂಬೇಡ್ಕರ್ ಅಂದು ಹೇಳಿದ್ದರು ಶಾಲೆಯೊಂದು ತೆರೆದರೆ ವಿದ್ವಾಂಸರ ಸೃಷ್ಟಿಯಾಗಲಿದೆ- ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಸೃಷ್ಟಿಯಾಗುವರೆಂದು ಇದನ್ನು ಎಲ್ಲರೂ ಅರಿಯಬೇಕು. ವಿಮಾನ ನಿಲ್ದಾಣ, ಬ್ಯಾಂಕ್, ವಿಮಾ ಸಂಸ್ಥೆಗಳ ಖಾಸಗೀ ಕರಣದ ಮೂಲಕ ಕೇಂದ್ರ ಬಿಜೆಪಿ ಸರ್ಕಾರವು ದೇಶವನ್ನು ಮಾರಾಟಮಾಡುತ್ತಾ ಸಾಗಿದೆ.
ಸಿಎಂ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಖಾಲಿ ಕೊಡದಲ್ಲಿ ಕಲ್ಲನ್ನು ಹಾಕಿ ಶಬ್ದ ಮಾಡಿದಂತಿದೆ ಎಂದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಡಗೂರು ರುದ್ರೇಶ್ ಮಾತನಾಡಿ ಸರ್ಕಾರ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ನಾವುಗಳು ತೊಂದರೆ ಅನುಭವಿಸುವಂತಾಗಿದೆ. ಎಸಿ ಹಾಗೂ ಡಿಸಿ ನ್ಯಾಯಾಲಯ, ಹೈಕೋರ್ಟ್ಗಳಲ್ಲಿ ದಲಿತರಿಗೆ ವಿರುದ್ಧವಾದ ತೀರ್ಪುಗಳು ಬರುತ್ತಿದ್ದು, ಶಾಸಕ ರೇಣುಕಾಚಾರ್ಯ ತಾಲ್ಲೂಕಿನಲ್ಲಿ ಎಸಿ ಕಛೇರಿ ತೆರೆಯಲು ಆಸಕ್ತಿ ತೋರುತ್ತಿಲ್ಲ ಎಂದರು.
ಪಟ್ಟಣದಲ್ಲಿ ಇದೆ 30 ರ ಒಳಗೆ ಅಂಬೇಡ್ಕರ್ ಸರ್ಕಲ್ ನಿರ್ಮಿಸದಿದ್ದರೆ ಏಪ್ರಿಲ್ 14 ರಂದು ನಾವೇ ಯಾವುದಾದರು ಒಂದು ವೃತ್ತಕ್ಕೆ ಬಿ.ಆರ್.ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಿಕೊಳ್ಳುತ್ತೇವೆ ಎಂದು ತಾಲ್ಲೂಕು ಆಡಳಿತ ಹಾಗೂ ಶಾಸಕರಿಗೆ ಎಚ್ಚರಿಕೆ ನೀಡಿದರು. ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪೋತ್ಸಾಹದ ಹಣ ವನ್ನು ಮುಂದುವರೆಸುವಂತೆ ಒತ್ತಾಯಿಸಿದರು.
ಟಿ.ಬಿ. ವೃತ್ತದಿಂದ ಮೆರವಣಿಗೆ ನಡೆಸಿದ ಸಮಿತಿಯು ತಹಶೀಲ್ದಾರ್ ಬಸವನಗೌಡ ಅವರಿಗೆ ಮನವಿ ಸಲ್ಲಿಸಿದರು. ಸಮಿತಿಯ ಅಧ್ಯಕ್ಷ ಪರಮೇಶ್ , ಪ್ರಮುಖರಾದ ಆರ್. ನಾಗಪ್ಪ, ಬಡಾವಣೆ ರಾಜಪ್ಪ, ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್, ಶಿವಮೊಗ್ಗ ರಾಘವೇಂದ್ರ, ದಿಡಗೂರು ರುದ್ರೇಶ್, ಶಿಕಾರಿಪುರ ಬಸವರಾಜ್, ನಳಿನಕೊಪ್ಪ ಉಮೇಶ್, ಬನ್ನಿಕೋಡು ರುದ್ರೇಶ್ ಹಾಗೂ ಮತ್ತಿತರರಿದ್ದರು.