ದಾವಣಗೆರೆ, ಮಾ 11 – ಶ್ರೀ ಸರ್ವಜ್ಞ ಸಂಶೋಧನಾ ಪೀಠದ ಉದ್ಘಾಟನಾ ಕಾರ್ಯಕ್ರಮ ಜಯನಗರದ ಕುಂಭಶ್ರೀ ಸದನದಲ್ಲಿ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ಅಲಕ್ಷಿತ ದಾರ್ಶನಿಕರ, ತತ್ವಜ್ಞಾನಿಗಳ, ಸಮುದಾಯಗಳ ಸಂಸ್ಕೃತಿ ಸಂಶೋಧನೆಯ ಗುರಿಯನ್ನು ಇಟ್ಟುಕೊಂಡು ಜನ್ಮ ತಾಳಿರುವ ಸರ್ವಜ್ಞ ಸಂಶೋಧನಾ ಪೀಠ ಎಲ್ಲಾ ಧರ್ಮ, ಮತ, ಜಾತಿಗಳ ಅಲಕ್ಷಿತ ದಾರ್ಶನಿಕರ ಬಗ್ಗೆ ಸಂಶೋಧನೆ ನಡೆಸಿ ಬೆಳಕು ಚೆಲ್ಲುವ ಗುರಿ ಹೊಂದಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಜಾತ್ಯತೀತ ಸಂಶೋಧನಾ ಪೀಠ ಸ್ಥಾಪಿಸಿರುವ ಸಂಶೋಧಕ ಡಾ.ಬುರುಡೇಕಟ್ಟೆ ಮಂಜಪ್ಪ ಅವರು ಅಭಿನಂದನಾರ್ಹರು. ಇದುವರೆಗೂ ಅಲಕ್ಷಿತ ಸಮುದಾಯಗಳ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮತ್ತು ಪ್ರಬುದ್ಧತೆಯ ಸಂಶೋಧನೆಗಳು ಆಗಿಲ್ಲ.ಅಲಕ್ಷಿತ ಸಮುದಾಯಗಳ ಬಗ್ಗೆ ಅಲಕ್ಷಿತರೆ ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸವಾಗಿದೆ. ಸರ್ವಜ್ಞ ಸಂಶೋಧನಾ ಪೀಠ ಜಾತ್ಯತೀತವಾದ ನೆಲಗಟ್ಟಿನಲ್ಲಿ ಪ್ರಬುದ್ಧವಾಗಿ ಬೆಳೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಬಸವರಾಜ ಕುಂಚೂರ್ ವಹಿಸಿದ್ದರು. ಸರ್ವಜ್ಞ ಸಂಶೋಧನಾ ಪೀಠದ ಸಂಸ್ಥಾಪಕ ಅಧ್ಯಕ್ಷ ಡಾ.ಬುರುಡೇಕಟ್ಟೆ ಮಂಜಪ್ಪ, ಜಾನಪದ ಕಲಾವಿದ, ಪ್ರಸಿದ್ಧ ಗೊಟಗೋಡಿ ಮೂರ್ತಿ ಕಲಾವಿದ ಬಸವರಾಜ್ ಚ. ಕುಂಬಾರ್, ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತ್ ಅಧ್ಯಕ್ಷ ರಾಜಶೇಖರ ಗುಂಡಗಟ್ಟಿ, ಲಲಿತಕಲಾ ಕಾಲೇಜಿನ ಪ್ರಾಧ್ಯಾಪಕ ಹರೀಶ್, ಸದಾಶಿವಣ್ಣ, ಸಂಶೋಧಕ ಕೆ.ಎಂ. ರಾಘವೇಂದ್ರಚಾರ್, ರಾಣೇಬೆನ್ನೂರಿನ ನಾಗರಾಜ್ ಬಿ. ಚಕ್ರಸಾಲಿ, ರಾಜಸ್ಥಾನದ ಜೈಪುರದ ಅನಿಲ್, ಮೋಹನ್, ಉಪನ್ಯಾಸಕ ಕರಿಬಸಪ್ಪ, ಹಾಗೂ ಇತರರು ಇದ್ದರು.
ಕಾರ್ಯಕಮದಲ್ಲಿ ಪ್ರಾಚೀನ ತಾಳೆಗರಿ, ತಾಮ್ರಪತ್ರ , ಪ್ರಾಚೀನ ಹಸ್ತಪ್ರತಿಗಳ ಭಂಡಾರದ ಉದ್ಘಾಟನೆ ನೇರವೇರಿಸಿ ಪ್ರದರ್ಶನ ಮಾಡಲಾಯಿತು.