ಕೆ.ಎನ್‌. ಹಳ್ಳಿ : ಇಂದು ಕೋವಿಡ್‌ ಟೆಸ್ಟ್‌ ಶಿಬಿರ

ಮಲೇಬೆನ್ನೂರು, ಮೇ 16- ಸಮೀಪದ ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುವುದರಿಂದ ಗ್ರಾಮಸ್ಥರ ಕೋರಿಕೆಯಂತೆ ಆರೋಗ್ಯ ಇಲಾಖೆಯಿಂದ ಇಂದು ಜ್ವರ ತಪಾಸಣೆ ಹಾಗೂ ಚಿಕಿತ್ಸೆ ಮತ್ತು ಕೋವಿಡ್‌ ಟೆಸ್ಟ್‌ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾ. ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ತಿಳಿಸಿದ್ದಾರೆ.

ಗ್ರಾ.ಪಂ. ಕಛೇರಿಯಲ್ಲಿ ಭಾನುವಾರ ಗ್ರಾಮಸ್ಥರೊಂದಿಗೆ ಶಿಬಿರದ ಪೂರ್ವಭಾವಿ ಸಭೆ ನಡೆಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೋವಿಡ್‌ ಟೆಸ್ಟ್‌ಗೆ ಜ್ವರ ಸೇರಿದಂತೆ ಇತ್ಯಾದಿ ತೊಂದರೆಗಳಿಂದ ಬಳಲುತ್ತಿರುವವರನ್ನು ಕರೆತರುವಂತೆ ಕೋರಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿ. ಕುಬೇರಪ್ಪ, ಗ್ರಾ.ಪಂ. ಮಾಜಿ ಸದಸ್ಯ ಕೆ.ಹೆಚ್‌. ನಾಗನಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭು ಗೌಡ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ. ಹೊರಕೇರಿ, ಹಿರಿಯ ಆರೋಗ್ಯ ಸಹಾಯಕಿ ಕೋಕಿಲವಾಣಿ, ಕಿರಿಯ ಆರೋಗ್ಯ ಸಹಾಯಕರಾದ ಶ್ವೇತ, ಶಿವಶಂಕರ್‌, ಶೀಲಾ ಹಾಗೂ ಆಶಾ ಕಾರ್ಯಕರ್ತರು, ಗ್ರಾಮಸ್ಥರು ಸಭೆಯಲ್ಲಿ ಹಾಜರಿದ್ದರು. ಇದೇ ವೇಳೆ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನೂ ಆಚರಿಸಿ, `ಡೆಂಗ್ಯೂ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ’ ಘೋಷವಾಕ್ಯದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.

ಡೆಂಗ್ಯೂ, ಚಿಕನ್‌ಗುನ್ಯಾ ಕಾಯಿಲೆಗಳಿಗೆ ಯಾವುದೇ ಲಸಿಕೆ ಮತ್ತು ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಸೊಳ್ಳೆ ಉತ್ಪತ್ತಿ ತಡೆಗಟ್ಟುವುದೇ ಸುಲಭ ಹಾಗೂ ಸೂಕ್ತ ಉಪಾಯ ಎಂದು ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ಜನರಿಗೆ ಮನವರಿಕೆ ಮಾಡಿಕೊಟ್ಟರು.

error: Content is protected !!