ದಿಂಗಾಲೇಶ್ವರ ಶ್ರೀಗಳು
ಹರಪನಹಳ್ಳಿ,ಮಾ.10- ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ಇಳಿಸುವುದಲ್ಲದೆ, ಸಾಲಕ್ಕೆ ಮೂಲವಾಗುವುದನ್ನು ತಪ್ಪಿಸುತ್ತವೆ ಎಂದು ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನೀಲಗುಂದ ಗ್ರಾಮದ ಶ್ರೀಮಠದ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮಹಾದ್ವಾರದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಹಿಂದೆಲ್ಲಾ ಸಾಲಾವಳಿ ನೋಡಿ ಮದುವೆ ಮಾಡುತ್ತಿದ್ದರು. ಇಂದು ಹುಡುಗ-ಹುಡುಗಿಯ ರಕ್ತ ಪರೀಕ್ಷೆ ಮಾಡಿ ಮದುವೆ ಮಾಡಬೇಕಿದೆ. ಸಾಮೂ ಹಿಕ ವಿವಾಹಗಳಿಂದ ಜಾತ್ಯತೀತ ಮನೋಭಾವನೆಯನ್ನು ಹುಟ್ಟು ಹಾಕಿದ ಶರಣ ಬಸವಣ್ಣ, ಅಂದೇ ಐಷಾರಾಮಿ ವಿವಾಹಗಳು ಆರ್ಥಿಕ ಹೊರೆ ಎಂಬುದನ್ನು ಅರಿವಿಗೆ ತಂದಿದ್ದರು ಎಂದರು.
ನೀಲಗುಂದ ಗುಡ್ಡದ ವಿರಕ್ತ ಮಠದ ಪೀಠಾಧಿಪತಿಗಳಾದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ ಸಾಮೂಹಿಕ ವಿವಾಹಗಳು ಕೋಟ್ಯಾಂತರ ಹಣ ಉಳಿಕೆಗೆ ಕಾರಣವಾಗುತ್ತವೆ. ಮಿತ ಸಂತಾನಕ್ಕೆ ಆದ್ಯತೆ ಇರಲಿ. ಪ್ರೀತಿಯ ಜೊತೆಯಲ್ಲಿ ಆರ್ಥಿಕ ಮುಗ್ಗಟ್ಟು ಕಡಿಮೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಿಮ್ಮ ತಂದೆ-ತಾಯಿಗಳಿಗೆ ಗೌರವ, ಪ್ರೀತಿ ನೀಡಿದರೆ ಶ್ರೇಯಸ್ಸು ಲಭ್ಯವಾಗುವುದು. ವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುವ ಮನಸ್ಸಿನಿಂದ ಹೊರಬನ್ನಿ. ಆಗ ಮಾತ್ರ ನಿಮ್ಮ ಭವಿಷ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ §ನೀಲಗುಂದದ ನೀಲಾಂಜಲಿ¬ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ ಮಠದಲ್ಲಿ 60 ಜೋಡಿ ವಿವಾಹಗಳು ಜರುಗಿದ್ದು, ಅವಿಭಕ್ತ ಕುಟುಂಬದ ಜೊತೆಗೆ ಜೀವನ ನಡೆಸಿರಿ ಎಂದು ಕರೆ ನೀಡಿದರು. ಗ್ರಂಥದಲ್ಲಿ ಇಡೀ ಮಠದ ಹಾಗೂ ಶ್ರೀಗಳ ಜೀವನ ಚರಿತ್ರೆ ಚೆನ್ನಾಗಿ ಮೂಡಿ ಬಂದಿದೆ ಎಂದರು.
ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚೆನ್ನವೀರ ಶಿವಯೋಗಿ ಶ್ರೀಮಠದ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮಹಾದ್ವಾರದ ಉದ್ಘಾಟನೆ ನೇರವೇರಿಸಿ ಆಶೀರ್ವಚನ ನೀಡಿದರು. ಅಗಡಿ- ಗುತ್ತಲದ ಶ್ರೀ ಗುರುಸಿದ್ಧ ಸ್ವಾಮೀಜಿ, ಗುಡ್ಡದ ಅನ್ವೇರಿ ಮಠದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ವಕೀಲರುಗಳಾದ ಬಿ. ವಾಗೀಶ್, ಸಿದ್ದಲಿಂಗನಗೌಡ, ಮುಖಂಡರುಗಳಾದ ಗುಂಡಗತ್ತಿ ಕೊಟ್ರಪ್ಪ, ಬೇಲೂರು ಸಿದ್ದೇಶ್, ಮಾಳ್ಗಿ ತಿಮ್ಮೇಶ್, ತಿರುಪತಿ, ಶಿಕ್ಷಕ ಹನುಮಂತಪ್ಪ ಇನ್ನಿತರರು ಉಪಸ್ಥಿತರಿದ್ದರು.