ಜಗಳೂರು, ಮೇ 9- ಕೃಷಿ ಇಲಾಖೆಯಿಂದ ಪರವಾನಗಿ ಪಡೆಯದೇ ಇರುವಂತವರು ಮೆಕ್ಕೆ ಜೋಳ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ಮಾರಾಟ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸುಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಮಳಿಗೆ, ಗೋದಾಮುಗಳಿಗೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ತಂಡ ದಿಢೀರನೇ ಭೇಟಿ ನೀಡಿ ಪರೀಶಿಲನೆ ನಡೆಸಿತು.
ಈ ವೇಳೆ ಮಾತನಾಡಿ ದ ಅವರು, ಗುಣಮಟ್ಟ ವಲ್ಲದ ಮೆಕ್ಕೆಜೋಳದ ಬಿತ್ತನೆ ಬೀಜ ಮತ್ತು ಗೊಬ್ಬರಗಳು ತಾಲ್ಲೂಕಿನ ಕೆಲವು ಕಡೆ ಮಾರಾಟವಾಗುತ್ತಿವೆ ಎಂಬ ಮಾಹಿತಿ ಬಂದಿದೆ. ಗೋದಾಮುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸ ಲಾಗುತ್ತಿದೆ. ಕೆಲವು ಅಂಗಡಿ ಮಾಲೀಕರು ಬಾಗಿಲು ಮುಚ್ಚಿದ್ದಾರೆ. ಮತ್ತೆ ಕೆಲವರು ಪರಿಶೀಲನೆಗೆ ಸಹಕಾರ ನೀಡುತ್ತಿಲ್ಲ. ಬೀಜ ಗೊಬ್ಬರ ಮಾರಾಟ ಮಾಡಲಿ. ಆದರೆ, ಕೃಷಿ ಇಲಾಖೆಯಿಂದ ಪರವಾನಿಗೆ ಪಡೆದು ಮಾರಾಟ ಮಾಡಬೇಕು. ಪರವಾನಗಿ ಇಲ್ಲದೇ ಮಾರಾಟ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರೈತರು ಯಾರೋ ನೀಡುವ ಬಿತ್ತನೆ ಬೀಜ ತೆಗೆದು ಕೊಳ್ಳಬಾರದು. ಸರ್ಟಿಫೈಡ್ ಅಂಗಡಿ ಗಳಿಗೆ ತೆರಳಿ ಬೀಜ ಖರೀದಿ ಮಾಡಬೇಕು. ಜೊತೆಗೆ ರಸೀದಿಯನ್ನು ತಪ್ಪದೇ ಪಡೆಯಬೇಕು ಎಂದು ಮನವಿ ಮಾಡಿದರು. ಕೃಷಿ ಅಧಿಕಾರಿಗಳಾದ ಹರ್ಷ, ರೇಣುಕುಮಾರ್, ಕೃಷ್ಣಪ್ಪ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.