ಜಗಳೂರು, ಮೇ 9- ತಾಲ್ಲೂಕಿನ ಸೊಕ್ಕೆ, ಯರ್ಲಕಟ್ಟೆ, ಲಕ್ಕಂಪುರ, ಗೋಪಲಾಪುರ, ಮಡ್ರಹಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಅಡಿಕೆ, ಎಲೆಬಳ್ಳಿ ತೋಟ, ಮನೆಯ ತಗಡು, ಅನೇಕ ವಿದ್ಯುತ್ ಕಂಬಗಳು, ವಿದ್ಯುತ್ ಟಿ.ಸಿ ಬಿದ್ದು, ಲಕ್ಷಾಂತರ ರೂ. ನಷ್ಟ ಆಗಿರುವ ಘಟನೆ ವರದಿಯಾಗಿದೆ.
ಯರ್ಲಕಟ್ಟೆ ಗ್ರಾಮದಲ್ಲಿ ಎರಡು ದಿನಗಳಿಂದ ವಿದ್ಯುತ್ ಕಂಬಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಬೆಸ್ಕಾಂ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಯರ್ಲಕಟ್ಟೆ ಗ್ರಾಮದ ಬೋರ್‍ವೆಲ್ ಮಂಜಣ್ಣನವರ 40 ಅಧಿಕ ಫಸಲಿಗೆ ಬಂದ ಅಡಿಕೆ ಮರಗಳು ಗಾಳಿ ರಭಸಕ್ಕೆ ನೆಲಕ್ಕುರುಳಿವೆ. ಕುಬೇರಪ್ಪ, ಸುರೇಂದ್ರಪ್ಪ, ತಳವಾರ ಹನುಮಂತಪ್ಪ, ಸೇರಿದಂತೆ ಅನೇಕರ ಎಲೆಬಳ್ಳಿ ತೋಟಗಳು ಸಂಪೂರ್ಣವಾಗಿ ಬಿದ್ದು ನಾಶವಾಗಿವೆ. ಕೆಲವರ ಮನೆಗಳ ತಗಡು ಹಾರಿ ಹೋಗಿವೆ. ಲಕ್ಷಾಂತರ ರೂ. ನಷ್ಟವಾಗಿದೆ. ಜನರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.
ಗಾಳಿ ಸಹಿತ ಮಳೆಗೆ ಫಸಲಿಗೆ ಬಂದ ಅನೇಕ ಮರಗಳು, ಎಲೆ ಬಳ್ಳಿ ತೋಟಗಳು, ಮನೆಗಳ ತಗಡುಗಳು, ವಿದ್ಯುತ್ ಕಂಬಗಳು ಬಿದ್ದಿದ್ದು, ಲಕ್ಷಾಂತರ ನಷ್ಟವಾಗಿದೆ. ತ್ವರಿತ ಗತಿಯಲ್ಲಿ ಬೆಸ್ಕಾಂ ಇಲಾಖೆಯವರು ಕಂಬಗಳನ್ನು ಹಾಕಿ ವಿದ್ಯುತ್ ಕೊಡಬೇಕು. ಇದುವರೆಗೆ ಬೆಳೆ ನಷ್ಟದ ಬಗ್ಗೆ ಸ್ಥಳ ಪರಿಶೀಲಿಸಿ, ಸರ್ಕಾರಕ್ಕೆ ನಷ್ಟದ ವರದಿ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳಾಗಲೀ, ತೊಟಗಾರಿಕಾ ಕೃಷಿ ಅಧಿಕಾರಿಗಳಾಗಲೀ ಯಾರು ಬಂದಿಲ್ಲ ಎಂದು ಯರ್ಲಕಟ್ಟೆ ಗ್ರಾಮದ ರೈತ ಮಂಜಣ್ಣ ಅಳಲು ತೋಡಿಕೊಂಡಿದ್ದಾರೆ.