ಹರಿಹರ, ಮೇ 7- ಮುಂಗಾರು ಹಂಗಾಮು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸಕಾಲದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಲಭ್ಯವಾಗಲಿ ಎಂಬ ದೃಷ್ಟಿಯಿಂದ ತಾಲ್ಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಮಳಿಗೆಗಳನ್ನು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವಿ.ಪಿ. ಗೋವರ್ಧನ್ ಮತ್ತು ಕೃಷಿ ಅಧಿಕಾರಿಗಳಾದ ಹೆಚ್.ಆರ್. ಇನಾಯತ್, ಕೆ. ಮಲ್ಲಿಕಾರ್ಜುನ್ ಅವರುಗಳು ಪರಿಶೀಲಿಸಿದರು.
ಸಗಟು ಮಾರಾಟಗಾರರಿಗೆ ಈಗಾಗಲೇ ಯೂರಿಯಾ ಗೊಬ್ಬರ ಸರಬರಾಜಾಗಿದ್ದು, ಸರ್ಕಾರದ ನಿಯಮಾನುಸಾರ ಪಿ.ಓ.ಎಸ್. ಯಂತ್ರಗಳ ಮೂಲಕ ನಿಯಂತ್ರಿತವಾಗಿ ರೈತರಿಗೆ ನೀಡಲು ಅಂಗಡಿ ಮಾಲೀಕರಿಗೆ ಸೂಚಿಸಿದರು. ಬಿತ್ತನೆ ಬೀಜದ ಲೂಸ್ ಮಾರಾಟ ಕಂಡು ಬಂದಲ್ಲಿ ಮತ್ತು ದಾಸ್ತಾನೀಕರಿಸಿದಲ್ಲಿ ಸಂಬಂಧಿಸಿದ ಮಾರಾಟಗಾರರ ಪರವಾನಗಿ ರದ್ದು ಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಲಾಯಿತು.
ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಮತ್ತು ರೈತರ ವಿವರಗಳನ್ನು ದಾಖಲಿಸಿಕೊಳ್ಳುಬೇಕೆಂದು ತಿಳಿಸಿದರು. ಒಬ್ಬನೇ ರೈತನಿಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮಾರುವಂತಿಲ್ಲ ಹಾಗೂ ಹರಿಹರ ತಾಲ್ಲೂಕಿನ ರೈತರಿಗೆ ಮಾತ್ರ ರಸಗೊಬ್ಬರ ಮೀಸಲಿಡಲು ತಿಳಿಸಲಾಯಿತು. ರಸಗೊಬ್ಬರ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ಇರುವುದರಿಂದ ತಮ್ಮ ವ್ಯವಹಾರ ನಡೆಸುವಂತೆ ತಿಳಿಸಲಾಯಿತು.