ಮಲೇಬೆನ್ನೂರು, ಮಾ.9- ಪಟ್ಟಣದ ಹೊರವಲಯದಲ್ಲಿ (ಕುಂಬಳೂರು ರಸ್ತೆಯಲ್ಲಿ) ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ, ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವಸ್ಥಾನಗಳ ಸಮುಚ್ಛಯವನ್ನು ಮೇ 14, 15 ಹಾಗೂ 16 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿ ಸದಸ್ಯರು, ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಆದ ಬಿ. ಚಿದಾನಂದಪ್ಪ ತಿಳಿಸಿದ್ದಾರೆ.
ನೂತನ ದೇವಸ್ಥಾನಗಳ ಲೋಕಾರ್ಪಣೆ ಸಮಾರಂಭ ಕುರಿತು ಚರ್ಚಿಸಲು ಕರೆಯ ಲಾಗಿದ್ದ ಸಭೆಯಲ್ಲಿ ಅಂತಿಮವಾಗಿ ಕಾರ್ಯಕ್ರ ಮಗಳ ವಿವರವನ್ನು ಅವರು ಪ್ರಕಟಿಸಿದರು.
ಮೇ 14 ರಂದು ಬೆಳಿಗ್ಗೆ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಗೋಪುರಕ್ಕೆ ಕಳಸಾರೋಹಣ ನೆರವೇರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 15ರಂದು ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಮಾರಂಭ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಯಡ್ಯೂರಪ್ಪ ಸೇರಿದಂತೆ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ.
ಮೇ 16 ರಂದು ಬೆಳಿಗ್ಗೆ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಚಿದಾನಂದಪ್ಪ ತಿಳಿಸಿದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ. ಪಂಚಪ್ಪ ಈ ದೇವಸ್ಥಾನಗಳು ಎಲ್ಲಾ ಜನರ ಪುಣ್ಯಕ್ಷೇತ್ರವಾಗಲಿ ಎಂಬುದು ನಮ್ಮ ಆಶಯ ಎಂದರು. ಸಭೆಯಲ್ಲಿ ಹಲವರು ತನು-ಮನ-ಧನ ಸಹಾಯದ ವಾಗ್ದಾನ ಮಾಡಿದರು. ಪುರಸಭೆ ಪ್ರಭಾರ ಅಧ್ಯಕ್ಷೆ ಅಂಜಿನಮ್ಮ, ಕುಂಬಳೂರು ಗ್ರಾ.ಪಂ. ಅಧ್ಯಕ್ಷೆ ಲೀಲಾ ಶಿವಕುಮಾರ್, ಸೇರಿದಂತೆ ಗ್ರಾ.ಪಂ. ಸರ್ವ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪೂಜಾರ್ ಬಸಪ್ಪ, ಜಿ. ಮಂಜುನಾಥ್ ಪಟೇಲ್, ಮಾಗಾನಹಳ್ಳಿ ಹಾಲಪ್ಪ, ಯಕ್ಕನ ಹಳ್ಳಿ ಬಸವರಾಜಪ್ಪ, ಬಿ. ವೀರಯ್ಯ, ನಿಟ್ಟೂರು ಸಂಜೀವ ಮೂರ್ತಿ, ಮಹಾಂತೇಶ್ ಸ್ವಾಮಿ, ಮಹಾಲಿಂಗಪ್ಪ, ಮಾಸಣಗಿ ಶೇಖರಪ್ಪ, ಎಂ.ಆರ್. ಮಹಾದೇವಪ್ಪ, ಹಳೇಮನಿ ಶಂಭುಲಿಂಗಪ್ಪ, ಪಾಳೇಗಾರ್ ನಾಗರಾಜ್, ಕೆ.ಜಿ. ಮಂಜುನಾಥ್, ಭರಮಹಳ್ಳಿ ಭರಮಗೌಡ, ತಳಸದ ಬಸವರಾಜ್, ಕೆ.ಪಿ. ಗಂಗಾಧರ್, ಭೋವಿ ಕುಮಾರ್, ಶ್ರೀಪಾದ ಶ್ರೇಷ್ಠಿ, ರಾಮರೆಡ್ಡಿ, ಚಿಟ್ಟಕ್ಕಿ ನಾಗರಾಜ್, ಪೂಜಾರ್ ಹಾಲೇಶಪ್ಪ, ಚಿಕ್ಕಪ್ಪ ಮೇಷ್ಟ್ರು, ಕುಂಬಳೂರು ಆನಂದಪ್ಪ, ಜೆ. ನಾಗಭೂಷಣ್, ಹೊಸಳ್ಳಿ ಕರಿಬಸಪ್ಪ, ದೇವಸ್ಥಾನ ಸಮಿತಿಯ ಬಿ. ನಾಗೇಂದ್ರಪ್ಪ, ಬಿ. ಉಮಾಶಂಕರ್, ಬಿ. ಮಲ್ಲಿಕಾರ್ಜುನ್, ಬಿ. ನಾಗೇಶ್, ಬಿ.ವಿ. ರುದ್ರೇಶ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಉಪನ್ಯಾಸಕ ಹೊನ್ನಾಳಿ ಗಂಗಾಧರ್ ಸ್ವಾಗತಿಸಿ, ವಂದಿಸಿದರು.