ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನ್ಯಾಯಾಧೀಶ ಜಿ. ತಿಮ್ಮಯ್ಯ ಕಳವಳ
ಜಗಳೂರು, ಮಾ.8- ಭೂಮಿಯ ಉಗಮ ದಿಂದಲೂ ಧರ್ಮ ಮತ್ತು ಕಾನೂನಿನಡಿ ಮಹಿಳೆ ಸಮಾನ ಎಂಬ ಪುರಾವೆಗಳಿದ್ದರೂ ಸಮಾಜದಲ್ಲಿ ಸತಿ ಸಹಗಮನ, ಶಿಶು ಹತ್ಯೆಗಳಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳಿಂದ ಮಹಿಳೆಯ ಮೇಲೆ ನಿರಂತರ ಶೋಷಣೆ, ಹಕ್ಕುಗಳನ್ನು ಕಸಿಯುವ ಹುನ್ನಾರಗಳು ನಡೆಯುತ್ತಿವೆ ಎಂದು ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶ ಜಿ. ತಿಮ್ಮಯ್ಯ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ರಾಜರಾಜೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜಕ ಇಲಾಖೆ ಹಾಗೂ ದೇವರಾಜ್ ಅರಸು ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜ್ಞಾವಂತರಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆ ಮೂಲಕ ಸ್ತ್ರೀಯನ್ನು ಗೌರವಿಸಬೇಕು. ಹೆಣ್ಣು ಹುಟ್ಟಿನಿಂದ ಮಣ್ಣಿನವರೆಗೆ ಪುರುಷನ ಜೊತೆ ಜೀವಿಸುತ್ತಾಳೆ. ಯಾವುದೇ ಅಂಕಗಳಿಗೆ ನಿಲುಕದ ಶ್ರೇಷ್ಠ ಜೀವ ಹೆಣ್ಣಿನ ಸಂಬಂಧವಾಗಿದೆ. ಹೆಣ್ಣಿಗೆ ನಮ್ಮಷ್ಟೇ ಸರಿ ಸಮಾನತೆ ಕಲ್ಪಿಸಬೇಕು. ಕೇವಲ ಭಾಷಣ, ಪ್ರಚಾರಗಳ ತೋರ್ಪಡಿಕೆಗೆ ಮಾತ್ರ ಸೀಮಿತವಾಗಬಾರದು ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕಿ ಎಂ. ರೂಪ ಮಾತನಾಡಿ, ಇಂದಿಗೂ ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣಿ, ಶೋಷಣೆಗಳು, ದೌರ್ಜನ್ಯಗಳು ಕೊನೆಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನ ಬದ್ಧ ಸ್ಥಾನಮಾನಗಳಿದ್ದರೂ ದಶಕಗಳ ಹಿಂದೆ ಪುರುಷ ಪ್ರಧಾನ ಕುಟುಂಬಗಳಲ್ಲಿ ತಾತ್ಸಾರ ಮನೋಭಾವನೆಯಿಂದ ಒತ್ತಾಯಪೂರ್ವಕವಾಗಿ ದೇವದಾಸಿಯಂತಹ ಅನಿಷ್ಟ ಪದ್ಧತಿಗೆ ಮಹಿಳೆಯರು ಬಲಿಯಾಗಿರುವುದು ವಿಷಾದನೀಯ ಎಂದರು.
ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್. ಬಸವರಾಜಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಪ್ರಾಂಶುಪಾಲ ಬಸವರಾಜ್, ಶ್ರೀನಿವಾಸ್, ವಕೀಲರಾದ ರೂಪ, ನಾಗರತ್ನಮ್ಮ, ರುದ್ರೇಶ್, ಅರುಣಕುಮಾರ್, ಮಹಾಂತೇಶ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.