ಹೊನ್ನಾಳಿ, ಮೇ 6- ಕೊರೊನಾ ಸಂಕಷ್ಟ ದಿಂದ ಜನರ ಪ್ರಾಣ ರಕ್ಷಣೆ ಮಾಡದಿದ್ದರೆ ಜನ ಪ್ರತಿನಿಧಿಯಾಗಿ ಹಾಗು ಅಧಿಕಾರಿಯಾಗಿದ್ದು ಏನು ಪ್ರಯೋಜನ? ನಾಳೆಯಿಂದ ಪೊಲೀಸರು ಹಾಗೂ ಅಧಿಕಾರಿಗಳು ಕೊರೊನಾ ನಿಯಮ ಪಾಲಿಸದ ವ್ಯಕ್ತಿಗಳಿಗೆ ಲಾಠಿ ಚಾರ್ಜ್ ಹಾಗೂ ದಂಡ ಸೇರಿದಂತೆ ಯಾವುದೇ ಕಠಿಣ ನಿಯಮವಿದ್ದರೂ ಪಾಲಿಸುವ ಮೂಲಕ ತಾಲ್ಲೂಕಿನ ಕೊರೊನಾ ಸಾವಿನ ಪ್ರಮಾಣ ತಡೆಹಿಡಿಯಬೇಕೆಂದು ಶಾಸಕರು ಹೇಳಿದರು.
ಹೊನ್ನಾಳಿ ತಾಲ್ಲೂಕು ಕಛೇರಿಯಲ್ಲಿ ವರ್ತ ಕರು ಹಾಗೂ ತರಕಾರಿ ವ್ಯಾಪಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಾಸ್ಕ್ ಹಾಕದೆ, ಅಂತರ ಕಾಪಾಡಿಕೊಳ್ಳದೆ ಕೊರೊನಾ ನಿವಾರಣೆಯ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ ನಾನು ಇನ್ನು ಮುಂದೆ ಯಾವುದೇ ರಕ್ಷಣೆ ನೀಡುವುದಿಲ್ಲ. ಏಕೆಂದರೆ ತಾಲ್ಲೂಕಿನಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವ ಆತಂಕ ಕಂಡುಬರುತ್ತಿದೆ.
ಬೇಡಿಕೆಗೆ ತಕ್ಕಂತೆ ಬೆಡ್‍ಗಳ ಕೊರತೆ ಎದುರಾಗಬಹುದು. ಇದಕ್ಕೆಲ್ಲ ಕಡಿವಾಣ ಹಾಕಲು ಇರುವ ಒಂದೇ ಒಂದು ಮಾರ್ಗವೆಂದರೆ ಕೊರೊನಾ ಹರಡುವಿಕೆಯ ಚೈನ್ ಲಿಂಕ್ ತಪ್ಪಿಸುವುದಷ್ಟೆ.
ಇದಕ್ಕಾಗಿ ನಾಳೆಯಿಂದಲೇ ನಾವು ನಿಯಮ ಉಲ್ಲಂಘಿಸುವ ಯಾವುದೇ ವ್ಯಕ್ತಿಗಳು ದೂರವಾಣಿಯಲ್ಲಿ ಸಂಪರ್ಕಿಸಲು ಮುಂದಾದರೆ ನನ್ನಿಂದ ಯಾವುದೇ ಸಹಾಯ ದೊರಕದು. ಜನತೆಯ ಪ್ರಾಣ ಉಳಿಸುವುದು ಇಲ್ಲಿ ಅತಿಮುಖ್ಯವಾಗಬೇಕು.
ಅಂಗಡಿ ವ್ಯಾಪಾರಿಗಳು ಒಂದು ದಿನದ ಒಳಗಾಗಿ ಬಾಕ್ಸ್‌ಗಳನ್ನು ಹಾಕಿಕೊಂಡು, ಅಂತರ ಕಾಪಾಡಿ, ನಿಯಮ ಪಾಲನೆಯಿಂದ ವ್ಯಾಪಾರ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಆರೋಗ್ಯ ನಿಮ್ಮ ಕುಟುಂಬಗಳು ಉಳಿಯುವುದು ಕಷ್ಟವಾಗ ಬಹುದೆಂದು ವಿವರಿಸಿ, ನಿಯಮ ಪಾಲಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.
ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಆವರಣದಲ್ಲಿ ನಡೆಸಲು ಕ್ರಮ ಕೈಗೊಳ್ಳುತ್ತಿದ್ದು, ಎಪಿಎಂಸಿಯಲ್ಲಿ ನಾಳೆ ಬೆಳಿಗ್ಗೆ 8 ಗಂಟೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ತಾವು ಭೇಟಿ ನೀಡುವೆ, ವ್ಯಾಪಾರಿಗಳು ಅಲ್ಲಿ 30 ಅಡಿ ಅಂತರದಲ್ಲಿ ಅಂಗಡಿ ನಿರ್ಮಿಸಿಕೊಂಡು ವಹಿವಾಟು ನಡೆಸಬೇಕೆಂದರು.
ಮದುವೆ ಮನೆಯಲ್ಲಿ ಹಾಗೂ ಶವ ಸಂಸ್ಕಾರದಲ್ಲಿ ನಿಯಮವನ್ನು ಗಾಳಿಗೆ ತೂರಲಾಗಿದ್ದು, ಇವೆರಡೂ ಕಡೆ ಕೊರೊನಾ ಚೈನ್ ಲಿಂಕ್ ಮುಂದುವರೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ತಮಗೂ ಸೇರಿದಂತೆ ಸರ್ಕಾರಕ್ಕೆ ಹಾಗೂ ತಾಲ್ಲೂಕು ಆಡಳಿತಕ್ಕೆ ಕೆಟ್ಟ ಹೆಸರು ಬರಲಿದೆ. ಎಲ್ಲದಕ್ಕೂ ಅಧಿಕಾರಿಗಳು ದಿಟ್ಟತನದ ಕ್ರಮಕ್ಕೆ ಮುಂದಾಗಿ ಎಂದು ಖಡಕ್ ಸಂದೇಶ ನೀಡಿದರು.
ಸಭೆಯಲ್ಲಿ ವರ್ತಕರಾದ ಜಗದೀಶ್, ರುದ್ರೇಶ್, ಶಿವಕುಮಾರ ಮಠದ್, ವೀರೇಶ್, ಅಂದಾನಿ ರಾಕೇಶ್, ಗಂಗಾಧರ್, ಜಗಣ್ಣ, ಮಹೇಶ್, ಮುತ್ತಣ್ಣ ಸೇರಿದಂತೆ ತಾಲ್ಲೂಕಿನ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.