ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್
ಹರಿಹರ, ಮೇ 7- ಕೋವಿಡ್ ನಿಯಂತ್ರಣ ಮಾಡಲು ಜಿಲ್ಲೆಯ ಎಲ್ಲಾ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಣೆ ಮಾಡುವುದಕ್ಕೆ ಸಿಬ್ಬಂದಿಗಳ ಕೊರತೆ ಬಂದರೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದ ಗುತ್ತೂರು ಬಳಿ ಇರುವ ಕೋವಿ ಡ್ ಕೇರ್ ಸೆಂಟರ್ನ ಕೊರೊನಾ ರೋಗಿಗಳ ಯೋಗಕ್ಷೇಮ ವಿಚಾರಿಸಿ, ವ್ಯವಸ್ಥೆಯ ಕುರಿತು ವಿಚಾರಿಸಿ, ಮಾಹಿತಿ ಪಡೆದರು. ನಂತರ ಸದರ್ನ್ ಗ್ಯಾಸ್ ಏಜೆನ್ಸಿ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ನಂತರದಲ್ಲಿ ಪತ್ರ ಕರ್ತರೊಂದಿಗೆ ಅವರು ಮಾತನಾಡಿದರು.
ರಾಜ್ಯಾದ್ಯಂತ ಕೊರೊನಾ ರೋಗದ ಹರಡುವಿಕೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಂಪೂರ್ಣವಾಗಿ ಹತೋಟಿಗೆ ತರಲು ಸರ್ಕಾರ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಸಾರ್ವಜನಿಕರು ತಮಗೆ ಕೊರೊನಾ ಬಂದಿದೆ ಎಂದು ಯಾವುದೇ ರೀತಿಯ ಭಯ ಪಡದೆ ಧೈರ್ಯದಿಂದ ಇರಬೇಕು. ಉದ್ವೇಗಕ್ಕೆ ಒಳಗಾಗದೆ ಏನೇ ಸಮಸ್ಯೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಮುಂದಾಗಬೇಕು. ಒಂದು ವಾರದೊಳಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗಲಿದ್ದು, ಸಾರ್ವಜನಿಕರು ಲಸಿಕೆಯ ಬಗ್ಗೆ ಯಾವುದೇ ರೀತಿಯ ಆತಂಕವನ್ನು ಇಟ್ಟುಕೊಳ್ಳಬಾರದು ಎಂದು ಹೇಳಿದರು.
ಸದರನ್ ಗ್ಯಾಸ್ ಲಿಮಿಟೆಡ್ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗಳ ಜೊತೆಯಲ್ಲಿ ಆಕ್ಸಿಜನ್ ಸರಬರಾಜು ಯಾವ ಪ್ರಮಾಣದಲ್ಲಿ ಇದೆ, ದಿನಕ್ಕೆ ಎಷ್ಟು ಟ್ಯಾಂಕರ್ ಸರಬರಾಜು ಮಾಡಲಾಗುತ್ತಿದೆ, ಇತ್ಯಾದಿ ಮಾಹಿತಿಗಳನ್ನು ಪಡೆದರು. ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಬರದಂತೆ ಸರಬರಾಜು ಮಾಡುವಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಿಕೊಂಡು ವಿತರಣೆ ಮಾಡುವಂತೆ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಕೊರೊನಾ ರೋಗಿಗಳ ಚಿಕಿತ್ಸಾ ಕೊಠಡಿಗೆ ಭೇಟಿ ನೀಡಿ ಅಲ್ಲಿರುವ ಕೊರೊನಾ ರೋಗಿಗಳನ್ನು ವಿಚಾರಿಸಿದರು. ರೋಗಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಂಡರು. ನಂತರ ಮಾತನಾಡಿದ ಸಚಿವರು, ಈ ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ವೆಂಟಿಲೇಷನ್ಗೆ ಆದ್ಯತೆ ನೀಡಲಾಗುವುದು. ವೈದ್ಯಕೀಯ ಅಧಿಕಾರಿಗಳು ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಉಪವಿಭಾಗಧಿಕಾರಿ ಮಮತಾ ಹೊಸಗೌಡ್ರು, ಜಿಲ್ಲಾ ಆರೋಗ್ಯ ಅಧಿಕಾರಿ ನಾಗರಾಜ್, ಜಿಲ್ಲಾ ಆರೋಗ್ಯ ನೋಡಲ್ ಅಧಿಕಾರಿ ನಟರಾಜ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ರಾಘವನ್, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಇ ಬಿರಾದಾರ್, ತಾ.ಪಂ. ಇಓ ಗಂಗಾಧರನ್, ಸಿಪಿಐ ಸತೀಶ್ ಕುಮಾರ್, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಡಾ. ಹನುಮನಾಯ್ಕ್, ಡಾ. ಸವಿತಾ, ಡಾ. ವಿಶ್ವನಾಥ ಕುಂದಗೋಳ ಮಠ, ಪಿಎಸ್ಐಗಳಾದ ಸುನೀಲ್ ಬಸವರಾಜ್ ತೆಲಿ, ಡಿ. ರವಿಕುಮಾರ್, ಪಿಡಿಓ ವಿಜಯಲಕ್ಷ್ಮಿ ಇನ್ನಿತರರು ಹಾಜರಿದ್ದರು.