ಹೊನ್ನಾಳಿ, ಮಾ.7- ಸ್ಥಳೀಯ ಸ.ಪ್ರ.ದ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ಮಾದರಿ ವೃತ್ತಿ ಕೇಂದ್ರದಡಿಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ನಡೆದ ಉದ್ಯೋಗ ಮೇಳವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಹಿಂದೆಲ್ಲಾ ಗಣ್ಯರ ಶಿಫಾರಸ್ಸಿಗೆ ಕೆಲಸ ದೊರೆಯುತ್ತಿತ್ತು. ಈಗ ವಿದ್ಯಾರ್ಹತೆ ಮಾನದಂಡದಲ್ಲಿ ನೇಮಕಾತಿ ನಡೆಯುತ್ತದೆ. ಇಂತಹ ಮೇಳದ ಸದುಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಿರಿ ಎಂದರು.
ಜಿಲ್ಲಾ ಉದ್ಯೋಗಾಧಿಕಾರಿ ಗಿರೀಶ್ ಮಾತನಾಡಿ, ಇಂದಿನ ಉದ್ಯೋಗ ಮೇಳದಲ್ಲಿ 444 ಅಭ್ಯರ್ಥಿಗಳು ನೋಂದಣಿಗೊಂಡು ಒಟ್ಟು 90 ಅಭ್ಯರ್ಥಿಗಳ ನೇರ ನೇಮಕಾತಿಯಾಗಿದ್ದು, 250 ಅಭ್ಯರ್ಥಿಗಳ ಹೆಸರನ್ನು ಮುಂದಿನ ಅವಧಿಗೆ ಕಾಯ್ದಿರಿಸಲಾಗಿದೆ. ದಾವಣಗೆರೆಯ ಸ್ಪಂದನಾ ಸ್ಫೂರ್ತಿ ಫೈನಾನ್ಸ್ ಲಿ. 10, ಚೈತನ್ಯ ಇಂಡಿಯಾ ಪಿನ್ ಕ್ರೆಡಿಟ್ ಪ್ರೈ. 5, ಅಭ್ಯರ್ಥಿಗಳ ನೇರ ನೇಮಕಾತಿ ಮಾಡಿಕೊಂಡಿದ್ದು, ವಿವಿಧ 19 ಕಂಪನಿಗಳು ನೇಮಕಾತಿ ಕಾರ್ಯದಲ್ಲಿ ಭಾಗವಹಿಸಿವೆ ಎಂದರು.
ಪ್ರಾಂಶುಪಾಲ ದೇವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಿಂಡಿಕೇಟ್ ಸದಸ್ಯ ಹಳದಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಹುಡೇದ್ ಪ್ರೇಮ್ ಕುಮಾರ್, ಗೋವಿಂದಪ್ಪ, ಉಪನ್ಯಾಸಕ ಡಾ.ಪಾರ್ಥ ಸಾರಥಿ, ಚೇತನ್, ನಾಗರಾಜ್ ನಾಯ್ಕ ಇನ್ನಿತರರಿದ್ದರು.