ಮಾನಹಾನಿಯಾದ ಮೇಲೆ ಕೋರ್ಟ್‌ ಆದೇಶದಿಂದ ಪ್ರಯೋಜನವಿಲ್ಲ

ಮಲೇಬೆನ್ನೂರಿನಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ

ಮಲೇಬೆನ್ನೂರು, ಮಾ.7- ಮಾನಹಾನಿಯಾದ ಮೇಲೆ ನ್ಯಾಯಾಲಯದ ಆದೇಶದಿಂದ ಪ್ರಯೋಜನವಾಗಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಅವರು ಭಾನುವಾರ ಹರಿಹರ ತಾಲ್ಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಲವು ಸಚಿವರು ತೇಜೋವಧೆ ತಪ್ಪಿಸಿಕೊಳ್ಳಲು ಅಂಟಿಸಿಪೇಟರಿ ಬೇಲ್ ಮೊರೆ ಹೋಗಿರಬಹುದು. ಮಾಧ್ಯಮಗಳಲ್ಲಿ ಪ್ರಸಾರ ತಡೆಗೆ ನ್ಯಾಯಾಲಯವೂ ಆದೇಶ ನೀಡಿದೆ.

ಈ ವಿಚಾರದಲ್ಲಿ ನೈತಿಕತೆ ಮತ್ತು ಕಾನೂನಿನ ಆಯಾಮವಿದೆ. ಯಾವ ದೃಷ್ಟಿಯಿಂದ ನ್ಯಾಯಾಲಯ ಗಮನಿಸುತ್ತದೆ ಎಂಬುದು ಇಲ್ಲಿ ಮುಖ್ಯವಾಗಿದೆ. ಸಿಡಿಗಳ ದೃಶ್ಯಾವಳಿ ಫೇಕ್‌ ಆಗಿರಲೂಬಹುದು. ಪೊಲೀಸ್‌ ತನಿಖೆ ಹಾಗೂ ನ್ಯಾಯಾಲಯದಿಂದ ಸತ್ಯ ಹೊರಬರಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಚಿವರಿಗೆ ಅದ್ಧೂರಿ ಸ್ವಾಗತ : ಸಚಿವರಾದ ನಂತರ ಇದೇ ಮೊದಲ ಬಾರಿಗೆ ಹರಿಹರ ತಾಲ್ಲೂಕಿಗೆ ಆಗಮಿಸಿದ ಜೆ.ಸಿ. ಮಾಧುಸ್ವಾಮಿ ಅವರನ್ನು ನೊಳಂಬ ಲಿಂಗಾಯತ ಸಮಾಜದವರು ಹರಿಹರ ಬೈಪಾಸ್‌ ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು.

ನಂತರ ಬೃಹತ್‌ ಬೈಕ್‌ ರಾಲಿ ಮೂಲಕ ಎಕ್ಕೆಗೊಂದಿ, ನಂದಿತಾವರೆ, ಜಿಗಳಿ, ಜಿ.ಬೇವಿನಹಳ್ಳಿ, ಹಳ್ಳಿಹಾಳ್‌, ಕೊಕ್ಕನೂರು, ಹಿಂಡಸಘಟ್ಟಿ, ಗೋವಿನಹಾಳ್‌ ಗ್ರಾಮಗಳ ಮೂಲಕ ನಂದಿಗುಡಿ ಮಠಕ್ಕೆ ಸಚಿವರನ್ನು ಕರೆ ತರಲಾಯಿತು.

ನಂದಿಗುಡಿ ಮಠದಿಂದ ಶ್ರೀಗಳ ಜೊತೆ ಸಚಿವರು ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ನಂತರ ಸಣ್ಣ ಸಿಂಗಾಪುರದಲ್ಲಿ ಹಮ್ಮಿಕೊಂಡಿದ್ದ ಸಮಾಜದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‌, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್‌, ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್, ಸಮಾಜದ ಮುಖಂಡ ಜಿಗಳಿ ಇಂದೂಧರ್, ತಾ.ಪಂ. ಸದಸ್ಯ ನಂದಿತಾವರೆ ಬಸಲಿಂಗಪ್ಪ, ವಕೀಲ ತಿಮ್ಮನಗೌಡ, ಶ್ರೀ ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಹಳ್ಳಿಹಾಳ್‌ ವೀರನಗೌಡ, ಪಿ. ಮಹಾಲಿಂಗಪ್ಪ, ಜಿಗಳಿಯ ಗೌಡ್ರು ಬಸವರಾಜಪ್ಪ, ಟಿ. ಚಂದ್ರಶೇಖರಪ್ಪ, ಜಿ.ಎಂ. ಬಸವನಗೌಡ, ಎಂ.ವಿ. ನಾಗರಾಜ್, ಬಿಳಸನೂರು ಚಂದ್ರಪ್ಪ, ಎನ್‌.ಎಂ. ಪಾಟೀಲ್‌, ಜಿ.ಪಿ. ಹನುಮಗೌಡ, ಜಿ. ಬೇವಿನಹಳ್ಳಿಯ ಬಿ.ಕೆ. ಮಹೇಶ್ವರಪ್ಪ,  ಬೆನ್ನೂರು ಕುಬೇರಪ್ಪ, ಹುಲ್ಲತ್ತಿ ರುದ್ರಗೌಡ, ಹಳ್ಳಿಹಾಳ್ ಪರಮೇಶ್ವರಪ್ಪ, ಮಲ್ಲನಗೌಡ, ಕೊಕ್ಕನೂರು ಗ್ರಾ.ಪಂ. ಅಧ್ಯಕ್ಷ ನಿಂಗನಗೌಡ್ರು ಮತ್ತು ಇತರರು ಈ ವೇಳೆ ಹಾಜರಿದ್ದರು.

error: Content is protected !!