ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ವಿಧಾನಸಭಾ ಮಾಜಿ ಅಧ್ಯಕ್ಷ ಕೋಳಿವಾಡ
ರಾಣೇಬೆನ್ನೂರು, ಜು.25- ಮದುವೆ, ನಾಮಕರಣ, ಜನುಮ ದಿನ ಆಚರಣೆ ಮುಂತಾದ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡದೇ ಆ ಹಣದಿಂದ ಬಡವರ, ದೀನದಲಿತರ ನೋವು, ನಲಿವುಗಳಿಗೆ ಸ್ಪಂದಿಸಿದರೆ ಭಾರತದ ಭವಿಷ್ಯ ಉಜ್ವಲವಾಗಲಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.
ಇಲ್ಲಿನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಎಪಿಎಂಸಿ ನಿರ್ದೇಶಕ ಪರಮೇಶ್ವರ ಗೂಳಣ್ಣನವರ ನೀಡಿದ ನೋಟ್ ಬುಕ್, ಜ್ಯಾಮಿಟ್ರಿ ಬಾಕ್ಸ್, ಬ್ಯಾಗ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಹುಟ್ಟುಹಬ್ಬದ ಸವಿನೆನಪಿಗೆ ಕಳೆದ ವರ್ಷ ಹೊಲಗಳಿಗೆ ಹೋಗುವ ರಸ್ತೆ ರಿಪೇರಿ ಮಾಡಿಸಿದ್ದು, ಈ ವರ್ಷ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ, ಈ ರೀತಿಯ ಚಟುವಟಿಕೆಗಳು ಗೌರಮ್ಮ ಹಾಗೂ ಬಸಪ್ಪ ಗೂಳಣ್ಣನವರ ದಂಪತಿಗಳು ಮಕ್ಕಳಿಗೆ ನೀಡಿದ ಸಂಸ್ಕಾರದಿಂದಾಗಿ ನಡೆಯುತ್ತಿದೆ ಎಂದು ಕೆ.ಬಿ. ಕೋಳಿವಾಡ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ರಾಜ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲೇಶಣ್ಣ ಅರಕೇರಿ, ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಜಿ.ಪಂ. ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಜಿಲ್ಲಾ ಶಿಕ್ಷಣಾಧಿಕಾರಿ ಅಂದಾನಪ್ಪ ವಡಗೇರಿ, ವಿ.ಸಿ. ಪಾಟೀಲ ಪರಮೇಶ್ವರ್‌ಗೆ ಶುಭ ಕೋರಿದರು. ವಿವೇಕಾನಂದಾಶ್ರಮದ ಪ್ರಕಾಶಾನಂದ ಮಹಾರಾಜರು ಸಾನಿಧ್ಯ ವಹಿಸಿದ್ದರು.
6 ರಿಂದ 10 ನೇ ತರಗತಿಯ ಸುಮಾರು 460 ಮಕ್ಕಳಿಗೆ ಕಿಟ್ ವಿತರಿಸುವ ಈ ಕಾರ್ಯದಲ್ಲಿ ಸಹಕರಿಸಿದವರೆಲ್ಲರಿಗೆ ಕೃತಜ್ಞತೆ ಸಲ್ಲಿಸಿದ ಪರಮೇಶ್ವರಪ್ಪ ಎಲ್ಲರನ್ನು ಸ್ವಾಗತಿಸಿದರು, ನಗರಸಭೆ ಸದಸ್ಯ ಮಲ್ಲಪ್ಪ ಅಂಗಡಿ ವಂದಿಸಿದರು. ಲಿಂಗರಾಜ ಸುತ್ತಕೋಟಿ ನಿರೂಪಿಸಿದರು.