ಹರಪನಹಳ್ಳಿ, ಮಾ.7- ತಾಲ್ಲೂಕಿನಲ್ಲಿ ಕೋವಿಡ್ ಕರಿ ನೆರಳು ಮತ್ತೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಮಿನಿ ವಿಧಾನಸೌಧ ಪ್ರವೇಶಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ.
ಸ್ಥಳೀಯ ಮಿನಿ ವಿಧಾನಸೌ ಧದಲ್ಲಿ ತಹಶೀಲ್ದಾರ್, ಉಪವಿಭಾಗಾ ಧಿಕಾರಿ, ಉಪ ಖಜಾನೆ, ಸರ್ವೇ ಕಚೇರಿಗಳ ಕೆಲಸ, ಕಾರ್ಯಗಳಿಗೆ ಬರುವ ಜನರು ಕಡ್ಡಾಯವಾಗಿ ಕೋವಿಡ್ ವರದಿ ತರಬೇಕು. ಇಲ್ಲದಿದ್ದರೆ ಪ್ರವೇಶವಿಲ್ಲ.
ಬರುವ ಜನರು ಕೋವಿಡ್ ನೆಗೆಟಿವ್ ವರದಿ ತೋರಿಸಿ ಒಳಗೆ ಪ್ರವೇಶ ಮಾಡಬೇಕು. ಪರೀಕ್ಷೆ ನಡೆಸಲು ಪಕ್ಕದಲ್ಲಿಯೇ ಆಸ್ಪತ್ರೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಜನರು ಆಸ್ಪತ್ರೆ ಸಿಬ್ಬಂದಿ ಬಳಿ ಹೋಗಿ ಜ್ವರ ತಪಾಸಣೆ ನಡೆಸಿಕೊಂಡು, ಗಂಟಲು ದ್ರವ ನೀಡಿ ಬರಬೇಕು.
ಕೋವಿಡ್ ಲಕ್ಷಣಗಳು ಕಂಡು ಬಂದರೆ ರಾಪಿಡ್ ಪರೀಕ್ಷೆ ಸಹ ನಡೆಸಿ ಕೂಡಲೇ ವರದಿ ನೀಡುತ್ತಾರೆ. ಕೋವಿಡ್ ಲಕ್ಷಣಗಳು ಇಲ್ಲದಿದ್ದರೆ ಗಂಟಲು ದ್ರವ ಪಡೆದು ಲ್ಯಾಬ್‌ಗೆ ಕಳುಹಿಸಿ ಒಳಗೆ ಪ್ರವೇಶ ನೀಡುತ್ತಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ನಡೆದಿದೆ. ಯಾವುದಾದರೂ ಕಾಯಿಲೆ ಇರುವ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಎಲ್.ಎಂ. ನಂದೀಶ್ ಎಲ್ಲೆಡೆ ಎರಡನೇ ಹಂತದ ಕೋವಿಡ್ ಅಲೆ ಆರಂಭವಾಗಿರುವ ಲಕ್ಷಣಗಳು ಕಂಡು ಬಂದಿರುವುದರಿಂದ ನಾವು ಮಿನಿ ವಿಧಾನಸೌಧದಲ್ಲಿ ಇಂತಹ ಬಿಗಿ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿ ಕೋವಿಡ್ ಎರಡನೇ ಅಲೆ ಆರಂಭವಾಗಿರುವ ಲಕ್ಷಣಗಳು ಇದ್ದು, ಶೂನ್ಯವಿದ್ದ ಪ್ರಕರಣಗಳು ಮಾ.1 ರಿಂದ 6 ರವರೆಗೆ ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಜನನಿ ಬಿಡ ಸ್ಥಳಗಳಾದ ಮಿನಿ ವಿಧಾನಸೌಧ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಕೈಗೊಂಡಿದ್ದೇವೆ. ಜನರು ತಾವಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಾ ಇಲ್ಲ. ಶೀಘ್ರದಲ್ಲಿಯೇ ಬಸ್ ನಿಲ್ದಾಣ ಮುಂತಾದ ಕಡೆ ನಮ್ಮ ಸಿಬ್ಬಂದಿ ತೆರಳಿ ಕೋವಿಡ್ ತಪಾಸಣೆ ಕೈಗೊಳ್ಳುವರು ಎಂದರು.