ಪರೋಪಕಾರ ಭಾವನೆ ಬಿತ್ತಿದಾಗ ಪರಿಪೂರ್ಣತೆ

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನ ಮೂರ್ತಿ 

ದಾವಣಗೆರೆ, ಮಾ.7- ಕೇವಲ ಶಿಕ್ಷಣದಿಂದ ಮಕ್ಕಳ ಬದುಕಿನಲ್ಲಿ ಪರಿಪೂರ್ಣತೆ ಕಾಣಲಾಗುವುದಿಲ್ಲ. ಶಿಕ್ಷಣದ ನಂತರ ಸಮಾಜ ಸೇವೆ, ಪರೋಪಕಾರದ ಭಾವನೆ ಬಿತ್ತಬೇಕು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನ ಮೂರ್ತಿ  ಹೇಳಿದರು. 

ಅವರು ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಭಾರತ ಸೇವಾ ದಳ ಭವನದಲ್ಲಿ ಭಾರತ ಸೇವಾ ದಳ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಬ್ಯಾಂಡ್ ವಾದನ ಹಾಗೂ ಸೇವಾದಳ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಜಾನದ ಜೊತೆಗೆ ಸೇವಾ ಮನೋ ಭಾವನೆ ಬೆಳೆಸಬೇಕು. ಶಿಸ್ತು ರೂಢಿಸಿ, ಪರೋಪ ಕಾರದ ಭಾವನೆ ಬಿತ್ತಬೇಕು. ಆಗ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ದೇಶದ ಉತ್ತಮ ಪ್ರಜೆಗಳಾಗಿ ರೂಪಿಸಬಹುದು ಎಂದರು.

ಸೇವೆ ಎಂಬುದು ತತ್ವ. ಪ್ರಪಂಚದಲ್ಲಿ ಗಣಿತ, ವಿಜ್ಞಾನ, ಸಮಾಜ, ಭೌತಶಾಸ್ತ್ರ ಈ ಎಲ್ಲಾ ವಿಷಯಗಳಿಗಿಂತಲ್ಲೂ ಶ್ರೇಷ್ಠವಾದ ವಿಷಯ ತತ್ವಶಾಸ್ತ್ರ. ಎಲ್ಲಾ ತತ್ವಗಳಲ್ಲೂ ಪ್ರೀತಿ, ಗೌರವ, ಕ್ಷಮೆ ಇರಬೇಕೆಂಬುದೇ ತತ್ವಶಾಸ್ತ್ರದ ತಿರುಳು.  ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪರೋಪಕಾರ ಮತ್ತು ಸೇವೆಗಾಗಿ ಈ ಸಂಸ್ಥೆ ಹೆಜ್ಜೆ ಇಡುತ್ತಿರುವುದು ಪ್ರಶಂಸನಾರ್ಹ. ಇಂತಹ ಸಂಸ್ಥೆಗಳು ಅತ್ಯವಶಕವೆಂದರು.

ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಲ್ಲೂ ಸೇವಾ ದಳದ ಶಾಖೆ ತೆರೆದು ಮಕ್ಕಳಲ್ಲಿ ಸೇವಾ ಮನೋ ಭಾವನೆ ಕಲಿಸಬೇಕೆಂಬ ಉದ್ದೇಶವಿದೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪಿ. ಠಾಕೂರ್, ದಕ್ಷಿಣ ವಲಯ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ಬಿ.ಹೆಚ್. ವೀರಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಟಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾ ದಳದ ಉಪಾಧ್ಯಕ್ಷ ಯು. ಹನುಮಂತಪ್ಪ, ನಲ್ಲೂರು ರಾಘವೇಂದ್ರ, ವಲಯ ಸಂಘಟಕ ಎಂ. ಅಣ್ಣಯ್ಯ, ಜಿಲ್ಲಾ ಕಾರ್ಯದರ್ಶಿ ಡಾ. ಕೆ.ಜಿ. ಚಂದ್ರಪ್ಪ ಸೇರಿದಂತೆ ಜಿಲ್ಲೆಯ 6 ತಾಲ್ಲೂಕುಗಳ ದೈಹಿಕ ಶಿಕ್ಷಕರು ಹಾಜರಿದ್ದರು.

error: Content is protected !!