ಹರಿಹರ, ಜು.22- ಶ್ರೀ ಜಗದ್ಗುರು ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠ ಕಾಶೀಮಠ, ವಡ್ನಾಳ್ ವಿಶ್ವಕರ್ಮ ಮಠ ಹಾಗೂ ಹರಿಹರ ತಾಲ್ಲೂಕು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ನಾಳೆ ದಿನಾಂಕ 23 ರ ಶುಕ್ರವಾರ ಮರಿಯ ನಿವಾಸ ಶಾಲೆ ಆವರಣದಲ್ಲಿ ಸರ್ವ ಧರ್ಮದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬೆನಕಪ್ಪ ಆಚಾರ್ ತಿಳಿಸಿದ್ದಾರೆ.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು ಲಕ್ಷ್ಮಿ ನರ್ಸಿಂಗ್ ಹೋಂ ಇವರನ್ನು ವೈದ್ಯಕೀಯ ಪಾಲುದಾರರನ್ನಾಗಿ ನೇಮಿಸಿಕೊಂಡು ನಗರದಲ್ಲಿನ ಸುಮಾರು 2500 ಜನರಿಗೆ ಲಸಿಕೆಯನ್ನು ಹಾಕಲಾಗುತ್ತದೆ.
ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಆರ್ಸಿಹೆಚ್ ಇತರೆ ಲಸಿಕೆಗೆ ಸಂಬಂಧಿಸಿದ ಇಲಾಖೆಗಳು ಅನುಮತಿ ನೀಡಿರುತ್ತಾರೆ ಎಂದು ಮಾಹಿತಿ ನೀಡಿದರು.
ವಿಶ್ವಕರ್ಮ ಸಮಾಜದ ಮುಖಂಡ ವೀರೇಶ್ ಆಚಾರ್ ಮಾತನಾಡಿ, ಸಾರ್ವಜನಿಕರು ಲಸಿಕೆಯನ್ನು ಪಡೆಯಲು ಪಡುತ್ತಿರುವ ತೊಂದರೆಯನ್ನು ನಾನು ಸಾರ್ವಜನಿಕ ಆಸ್ಪತ್ರೆಯ ಸಲಹಾ ಸಮಿತಿಯ ಸದಸ್ಯನಾಗಿ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಶ್ರೀಗಳ ಗಮನಕ್ಕೆ ತಂದಾಗ ಇಲ್ಲಿನ ಜನರಿಗೆ ಲಸಿಕೆಯನ್ನು ಹಾಕುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರುದ್ರಾಚಾರ್, ಲಕ್ಷ್ಮೀ ರಾಜಚಾರ್, ಮಂಜುನಾಥ್ ಆಚಾರ್, ಹೇಮಾಚಾರ್ ಬನ್ನಿಕೋಡು, ಬಿ.ಎಸ್. ನಾಗರಾಜ್, ವಕೀಲ ಚಂದ್ರಚಾರ್, ಜನಾರ್ಧನ ಆಚಾರ್, ಉಮೇಶ್ ಆಚಾರ್ ಇನ್ನಿತರರಿದ್ದರು.