ಮಲೇಬೆನ್ನೂರು, ನ.8- ಮಹಾಮಾರಿ ಕೊರೊನಾ ಕಾರಣದಿಂದಾಗಿ ಕಳೆದ 20 ತಿಂಗಳಿ ನಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳು ಸರ್ಕಾರದ ಸೂಚನೆಯಂತೆ ಸೋಮವಾರ ಸಂಭ್ರಮದಿಂದ ಪುನರಾರಂಭವಾದವು.
ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಕಾರ್ಯಕರ್ತರು ಮತ್ತು ಸಹಾಯಕರು ಭಾನುವಾರವೇ ಸ್ವಚ್ಛ ಮಾಡಿ, ಹಸಿರು ತೋರಣಗಳಿಂದ ಶೃಂಗಾರ ಮಾಡಿದ್ದರು.
ಸೋಮವಾರ ಬೆಳಿಗ್ಗೆ ಕೇಂದ್ರಗಳಿಗೆ ಮಕ್ಕಳನ್ನು ಪೋಷಕರು ಕರೆ ತಂದಾಗ ಹೂವು ಮತ್ತು ಚಾಕೋಲೇಟ್ ನೀಡಿ ಸ್ವಾಗತಿಸಲಾಯಿತು. ಕೆಲವು ಮಕ್ಕಳು ಖುಷಿಯಿಂದ ಕುಳಿತಿದ್ದರೆ, ಕೆಲವರು ಅಳುತ್ತಾ ಪೋಷಕರ ಜೊತೆ ವಾಪಸ್ ಹೋದ ಘಟನೆಯೂ ನಡೆಯಿತು.
ಅಂಗನವಾಡಿ ಕೇಂದ್ರಗಳು ಬಂದ್ ಆಗಿದ್ದ ಸಂದರ್ಭದಲ್ಲಿ ಮಕ್ಕಳಿಗೆ ನೀಡಬೇಕಾದ ಕಾಳು ಸೇರಿದಂತೆ ಇತ್ಯಾದಿ ಪದಾರ್ಥಗಳನ್ನು ಪೋಷಕರನ್ನು ಕರೆಯಿಸಿ ನೀಡಿದ್ದರು. ಜಿಗಳಿಯ ಎಲ್ಲಾ 4 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ನಿರೀಕ್ಷಿಸಿದ ಮಟ್ಟದಲ್ಲಿ ಇದೆ ಎಂದು §ಎ¬ ಕೇಂದ್ರದ ಕಾರ್ಯಕರ್ತೆ ಸುವರ್ಣ §ಜನತಾವಾಣಿ¬ ಗೆ ತಿಳಿಸಿದರು.
ಗ್ರಾಮದ ಕಾರ್ಯಕರ್ತೆಯರಾದ ಚಂದ್ರಮ್ಮ, ಎಂ. ಸುವರ್ಣ, ಕೆ.ಎನ್. ನೇತ್ರಾವತಿ, ಸಹಾಯಕ ರಾದ ಅನಸೂಯಮ್ಮ, ಇಂದ್ರಮ್ಮ, ಶಾರದಾ, ಲಕ್ಷ್ಮಿ ಹಾಜರಿದ್ದರು. ಜಿಗಳಿ ಗ್ರಾ.ಪಂ. ಅಧ್ಯಕ್ಷರಾದ ಆಶಾ ಅಣ್ಣಪ್ಪ, ಉಪಾಧ್ಯಕ್ಷ ಮಲ್ಲನಗೌಡ, ಸದಸ್ಯರಾದ ಡಿ.ಎಂ. ಹರೀಶ್, ಕೆ.ಜಿ. ಬಸವರಾಜ್, ವೈ.ಆರ್. ಚೇತನ್, ವಿನೋದ, ಕರಿಯಮ್ಮ, ಪಿಡಿಒ ಉಮೇಶ್ ಹಾಜರಿದ್ದು, ಮಕ್ಕಳನ್ನು ಸ್ವಾಗತಿಸಿದರು. ಮಲೇಬೆನ್ನೂರಿನ ಎಲ್ ಅಂಗನವಾಡಿ ಕೇಂದ್ರದಲ್ಲಿ ಸಲಹಾ ಸಮಿತಿ ಅಧ್ಯಕ್ಷೆ ಮಾನಸ ದೀಪ ಬೆಳಗಿ ಚಾಲನೆ ನೀಡಿದರು. ಬೆಣ್ಣೆಹಳ್ಳಿ ಬಸವರಾಜ್, ಸಬೀನಾ ಬಾನು ಹಾಜರಿದ್ದು, ಪುಟಾಣಿಗಳಿಗೆ ಹೂ ನೀಡಿ ಸ್ವಾಗತಿಸಿದರು.
ಮಕ್ಕಳ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಕೇಂದ್ರದ ಕಾರ್ಯಕರ್ತೆ ಮಂಜುಳಾ ಪೋಷಕರಿಗೆ ತಿಳಿಸಿದರು.
ಕೊಮಾರನಹಳ್ಳಿ ಗ್ರಾಮದಲ್ಲಿ ಮಕ್ಕಳು ಹಾಗೂ ಪೋಷಕರನ್ನು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಾಂಜ್ ಮೇಳದೊಂದಿಗೆ ಅಂಗನವಾಡಿ ಎ ಕೇಂದ್ರಕ್ಕೆ ಕರೆತರಲಾಯಿತು.
ಗ್ರಾ.ಪಂ. ಸದಸ್ಯ ಮಡಿವಾಳರ ಬಸರಾಜ್ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಗೀತಮ್ಮ, ಸಹಾಯಕಿ ಶಾರದಮ್ಮ, ಆಶಾ ಕಾರ್ಯಕರ್ತೆಯರಾದ ರೇಖಮ್ಮ, ಮಂಜುಳಾ ಹಾಜರಿದ್ದರು.