ನವೆಂಬರ್‌ನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ

ಹೊನ್ನಾಳಿ, ಜು.22-  ಕೊರೊನಾ ಕಾರಣ ದಿಂದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನ ಮುಂದೂಡಲಾಗಿದ್ದು, ನವೆಂಬರ್ ತಿಂಗಳಲ್ಲಿ ಕಲ್ಬುರ್ಗಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾ ಭವನದಲ್ಲಿ ತಾಲ್ಲೂಕು ಕಾ ರ್ಯನಿರತ ಪತ್ರಕರ್ತರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.   

ತಾಲ್ಲೂಕಿನ ಪತ್ರಕರ್ತರನ್ನು ಇನ್ನು ಮುಂದೆ ಅರೆಕಾಲಿಕ ಸುದ್ದಿಗಾರರು ಎಂದು ನಾವು ಕರೆಯುವುದಿಲ್ಲ. ಅವರನ್ನು ಪೂರ್ಣಾವಧಿ ಪತ್ರಕರ್ತರು ಎಂದೇ ಕರೆಯುವಂತೆ ತಿದ್ದುಪಡಿ ಮಾಡಲಾಗಿದೆ. ಏಕೆಂದರೆ ಅವರು ಸುದ್ದಿಗಾಗಿ ಕೇವಲ ಒಂದೆರಡು ಗಂಟೆ ಮಾತ್ರ ಕೆಲಸ ಮಾಡುವುದಿಲ್ಲ. ದಿನವಿಡೀ ಸುದ್ದಿಗಾಗಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ಹೇಳಿದರು.

ಹತ್ತಾರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಬಸ್ ಪಾಸ್ ನೀಡುವ ವಿಷಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಕೆಲವೊಂದು ಐಎಎಸ್ ಅಧಿಕಾರಿಗಳ ಚಿತಾವಣೆಯಿಂದ ಇದು ಸಾಧ್ಯವಾಗಿರಲಿಲ್ಲ. ಶೀಘ್ರದಲ್ಲಿಯೇ ಇದು ನೆರವೇರಲಿದೆ ಎಂದರು. ಹಾಗೆಯೇ ಆಯುಷ್ಮಾನ್ ಆರೋಗ್ಯ ಹೆಲ್ತ್ ಕಾರ್ಡ್ ಕೂಡಾ ಪತ್ರಕರ್ತರಿಗೆ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಅದಕ್ಕಾಗಿ ಸರ್ಕಾರ ಅನುದಾನ ಮೀಸಲಿಡಬೇಕು ಎಂದರು.

ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಸರ್ಕಾರದಿಂದ ಬರಬೇಕಾಗಿದ್ದ 56 ಕೋಟಿ ರೂಪಾಯಿ ಜಾಹೀರಾತು ಮೊತ್ತವನ್ನು ಸಂಘದ ಹೋರಾಟದ ಫಲವಾಗಿ ಬಿಡುಗಡೆ ಮಾಡಲಾಗಿದೆ ಎಂದರು.   

ಇದೇ ಸಂದರ್ಭದಲ್ಲಿ ಸಂಘದಿಂದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಬೆಂಗಳೂರು ನಗರ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ್, ಸದಸ್ಯರಾದ ಲಕ್ಷ್ಮೀಪತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಸಂಘದ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋರಿ ಯೋಗೀಶ್ ಸ್ವಾಗತಿಸಿದರು. ಟಿ. ಶ್ರೀನಿವಾಸ್ ನಿರೂಪಿಸಿದರು. ಪತ್ರಕರ್ತರಾದ ಆಂಜನೇಯ, ಜಯಪ್ಪ, ಮಲ್ಲೇಶ್, ಷಣ್ಮುಖಯ್ಯ ಇದ್ದರು.

error: Content is protected !!